ದಂಪತಿಯ ಬ್ಯಾಗ್ ಕಳವುಗೈದು ಎಟಿಎಂನಿಂದ ಹಣ ಡ್ರಾ !
ಮಂಗಳೂರು, ಮಾ. 17: ದಿಲ್ಲಿ- ಎರ್ನಾಕುಳಂ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯ ಬ್ಯಾಗ್‌ನ್ನು ಕಳವುಗೈದು ಅದರಲ್ಲಿದ್ದ 3 ಎಟಿಎಂ ಕಾರ್ಡ್‌ಗಳಿಂದ 71,500 ರೂ. ನಗದು ಡ್ರಾ ಮಾಡಿರುವ ಘಟನೆ ನಡೆದಿದೆ.
ಮಾ. 8ರಂದು ಈ ಘಟನೆ ನಡೆದಿದ್ದು, ಶುಕ್ರವಾರ ಮಂಗಳೂರಿನ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈಲ್ವೇ ಇಲಾಖೆಯ ನಿವೃತ್ತ ಉದ್ಯೋಗಿ ರಾಮಚಂದ್ರ ರಾಮನ್ ನಾಯರ್ (63) ಎಂಬವರೇ ಬ್ಯಾಗ್‌ನ್ನು ಕಳೆದುಕೊಂಡವರು.
ಬ್ಯಾಗ್‌ನಲ್ಲಿ ರಾಮನ್ ಅವರ ಕೆನರಾ ಬ್ಯಾಂಕಿನ 1 ಮತ್ತು ಎಸ್‌ಬಿಐನ 1 ಎಟಿಎಂ ಕಾರ್ಡ್ ಹಾಗೂ ಪತ್ನಿಯ ಕೆನರಾ ಬ್ಯಾಂಕ್‌ನ ಎಟಿಎಂ ಕಾರ್ಡ್, ಆಧಾರ್ ಕಾರ್ಡ್, ನಗದು 2,500 ರೂ. ಹಾಗೂ ವಾಚ್ ಇತ್ತು ಎಂದು ಹೇಳಲಾಗಿದೆ.
ಮೂಲತ: ಕೇರಳದವರಾಗಿ, ಪ್ರಸ್ತುತ ಮಹಾರಾಷ್ಟ್ಸ್ರದ ನಾಸಿಕ್‌ನಲ್ಲಿ ವಾಸವಾಗಿರುವ ರಾಮಚಂದ್ರ ರಾಮನ್ ನಾಯರ್ ಅವರು ಮಾ.8ರಂದು ಅವರು ಪತ್ನಿ ಸಮೇತ ನಾಸಿಕ್‌ನಿಂದ ಕೋಝಿಕೋಡ್‌ಗೆ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದರು. ಪ್ರಯಾಣದ ಸಂದರ್ಭದಲ್ಲಿ ರಾಮಚಂದ್ರರ ಪತ್ನಿ ಬ್ಯಾಗನ್ನು ತಲೆ ಅಡಿಯಲ್ಲಿ ಇಟ್ಟು ಮಲಗಿದ್ದರು. ಮುಂಜಾನೆ 3:30 ಕ್ಕೆ ರೈಲು ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಂತಾಗ ಅವರಿಗೆ ಎಚ್ಚರವಾಗಿ, ಅವರ ಬ್ಯಾಗ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಅಲ್ಲಿನ ರೈಲ್ವೇ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ರಾಮಚಂದ್ರ ರಾಮನ್ ಅವರು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಅದೇ ದಿನ ಮಂಗಳೂರಿನಲ್ಲಿ ಮೂರೂ ಎಟಿಎಂ ಕಾರ್ಡ್‌ಗಳಿಂದ 71,500 ರೂ. ಡ್ರಾ ಮಾಡಿರುವ ಗೊತ್ತಾಗಿದೆ. ಕಳವು ಆರೋಪಿ ಮಂಗಳೂರಿನ ಎಟಿಎಂ ಮೆಶಿನ್‌ಗಳಿಂದ ಹಣ ಡ್ರಾ ಮಾಡಿರುವುದರಿಂದ ಆತ ರೈಲಿನಿಂದ ಮಂಗಳೂರಿನಲ್ಲಿ ಇಳಿದಿರ ಬೇಕೆಂದು ಶಂಕಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮಂಗಳೂರು ರೈಲ್ವೇ ಪೊಲೀಸರಿಗೆ ವರ್ಗಾಯಿಸಲಾಗಿದೆ.