ಕನ್ಯಾನ ಗ್ರಾಪಂ ನಕಲಿ ಸಹಿ, ಸೀಲು ಪ್ರಕರಣ: ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬಂಟ್ವಾಳ, ಮಾ. 17: ಕನ್ಯಾನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಸಹಿಯನ್ನು ಪೋರ್ಜರಿ ಮಾಡಿರುವುದಲ್ಲದೆ ಚಲಾವಣೆಯಲ್ಲಿಲ್ಲದ ಹಳೆಯ ಸೀಲುಗಳನ್ನು ಬಳಕೆ ಮಾಡಿ ರಸ್ತೆ ಬದಿಯ ಅಕ್ರಮ ತಟ್ಟಿ ಅಂಗಡಿಗೆ ವಿದ್ಯುತ್ ಸಂಪರ್ಕ ಪಡೆಯಲು ಎನ್‌ಒಸಿ ಮಾಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದ್ದು, ಈ ಬಗ್ಗೆ ಶುಕ್ರವಾರ ಅಭಿವೃದ್ಧಿ ಅಧಿಕಾರಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿರುವ ಅಕ್ರಮ ತಟ್ಟಿ ಅಂಗಡಿಗಳಿಗೆ ಎನ್‌ಒಸಿ ಪಡೆದು ವಿದ್ಯುತ್ ಸಂಪರ್ಕ ಪಡೆದಿರುವುದನ್ನು ರದ್ದು ಪಡಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ ಮೆಸ್ಕಾಂಗೆ ಪತ್ರ ಬರೆದಿದ್ದರು. ಇದನ್ನು ಪ್ರಶ್ನಿಸಿ ಅಂಗಡಿ ಮಾಲಕರು ತಾಲೂಕು ಕಾರ್ಯ ನಿರ್ವಹಣಾಧಿಕಾರಿಯ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಆ ಬಳಿಕ ರಸ್ತೆ ಬದಿಯ ಯಾವುದೇ ತಟ್ಟಿ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಪಂಚಾಯತ್‌ನಿಂದ ಎನ್‌ಒಸಿ ನೀಡಿರಲಿಲ್ಲ. ಗುರುವಾರ ಬೆಳಗ್ಗೆ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ಮಾಡಿದ ತಟ್ಟಿ ಅಂಗಡಿ ಮಾಲಕನೊಬ್ಬ ವಿದ್ಯುತ್ ಪಡೆಯಲು ಬೇರೆಯವರಿಗೆ ಎನ್‌ಒಸಿ ನೀಡಲಾಗುತ್ತಿದೆ. ನನಗೆ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಅನುಮಾನಗೊಂಡ ಪಿಡಿಒ ಎನ್‌ಒಸಿ ಬಗ್ಗೆ ಪರಿಶೀಲನೆ ನಡೆಸಿದಾಗ ತನ್ನ ನಕಲಿ ಸಹಿ ಪೋರ್ಜರಿ ಆಗಿರುವುದೂ ಅಲ್ಲದೆ ಪಂಚಾಯತ್‌ನ ಹಳೆಯ ಸೀಲುಗಳನ್ನು ದುರ್ಬಳಕೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬಳಕೆಯಲ್ಲಿಲ್ಲದ ಹಳೆಯ ಸೀಲುಗಳನ್ನು ದುರ್ಬಳಕೆ ಮಾಡಿಕೊಂಡಿರುವ ಹಿಂದೆ ಪಂಚಾಯತ್ ಕಚೇರಿಯ ಒಳಗಿನ ವ್ಯಕ್ತಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಬರವಣಿಗೆ ಶೈಲಿ ಪಂಚಾಯತ್ ಸಿಬ್ಬಂದಿಗೆ ಹೋಲಿಕೆ ಇಲ್ಲವಾಗಿದ್ದು, ಸರಕಾರಿ ಕಚೇರಿಗಳ ಡೋರ್ ನಂಬರ್ ನಮೂದಿಸುವ ಮೂಲಕ ತಪ್ಪು ಮಾಹಿತಿಗಳನ್ನು ಫಾರ್ಮಿನಲ್ಲಿ ತುಂಬಲಾಗಿದೆ ಎಂಬ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.