×
Ad

ಭೂಮಾಲಕರ ಅಭಿಪ್ರಾಯ ಸಂಗ್ರಹಿಸಿ ಸರಕಾರಕ್ಕೆ ವರದಿ: ಜಿಲ್ಲಾಧಿಕಾರಿ

Update: 2017-03-17 23:57 IST

ಮಂಗಳೂರು, ಮಾ. 17: ಎಂಆರ್‌ಪಿಎಲ್ 4ನೆ ಹಂತದ ವಿಸ್ತರಣೆಗೆ ಕೆಐಎಡಿಬಿಯಿಂದ ನಡೆದಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಫೋರ್ಜರಿ ನಡೆದಿದೆ ಎಂಬ ದೂರಿನ ಕುರಿತಂತೆ ಭೂ ಮಾಲಕರ ಅಭಿಪ್ರಾಯ ಸಂಗ್ರಹಿಸಿ ಸರಕಾರಕ್ಕೆ ವರದಿ ನೀಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಹೇಳಿದ್ದಾರೆ.

ಎಂಆರ್‌ಪಿಎಲ್ ನಾಲ್ಕನೆ ಹಂತದ ವಿಸ್ತರಣೆಗಾಗಿ ನಡೆಯುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊ ಳ್ಳುವ ಮಾಲಕರ ಅಭಿಪ್ರಾಯ ಕ್ರೋಡೀಕರಣಕ್ಕಾಗಿ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಗುರುವಾರ ಕರೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಇತ್ತೀಚೆಗೆ ಮುಖ್ಯಮಂತ್ರಿ ನಗರಕ್ಕೆ ಭೇಟಿ ನೀಡಿದ್ದ ವೇಳೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಶೇ.75ರಷ್ಟು ಫೋರ್ಜರಿ ನಡೆದಿರುವುದಾಗಿ ಹೋರಾಟಗಾರರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭೂ ಮಾಲಕರ ಅಭಿಪ್ರಾಯ ಸಂಗ್ರಹ ಮಾಡಿ ಜಿಲ್ಲಾಡಳಿತ ಸರಕಾರಕ್ಕೆ ವರದಿ ನೀಡಲಿದೆ ಎಂದರು.

ಪ್ರಸ್ತುತ ಕೆಐಎಡಿಬಿಯಿಂದ ಭೂಸ್ವಾಧೀನ ಪ್ರಕ್ರಿಯೆ ನಡೆ ಯುತ್ತಿದೆ. ಅದರಲ್ಲಿ ಜಿಲ್ಲಾಡಳಿತದ ಪಾತ್ರವಿಲ್ಲ. ಆದರೆ ಪರಿಹಾರ ನೀಡುವ ವೇಳೆ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡ ಲಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಸಭೆಯಲ್ಲಿ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು, ಮೂಳೂರು ಹಾಗೂ ಕಂದಾವರದ ಸಾರ್ವಜನಿಕರನೇಕರು ಭೂಸ್ವಾಧೀನ ಕುರಿತು ಪರ ಹಾಗೂ ವಿರೋಧ ವಾದ ಮಂಡಿಸಿದರು.

ಪೆರ್ಮುದೆಯ ಹೇಮಲತಾ ಭಟ್ ಮಾತನಾಡಿ, ಅಪಾಯಕಾರಿ ಕಂಪೆನಿ ವಿಸ್ತರಣೆಗೆ ಅವಕಾಶ ನೀಡಬಾರದು. ಇಲ್ಲಿನ ಕೃಷಿ ಭೂಮಿ ಕಸಿದುಕೊಂಡು ರೈತರನ್ನು ಬೀದಿ ತಳ್ಳು ವುದು ನ್ಯಾಯಸಮ್ಮತವಲ್ಲ ಎಂದರು. ಪೆರ್ಮುದೆ ಹಾಗೂ ಕುತ್ತೆತ್ತೂರು ಗ್ರಾಮಗಳನ್ನು ಎಂಆರ್‌ಪಿಎಲ್ ದತ್ತು ಪಡೆದು ಅಭಿವೃದ್ಧಿ ಮಾಡುವುದಾಗಿ ಹೇಳಿತ್ತು. ಆದರೆ ಈಗ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರೊಬ್ಬರು ದೂರಿದರು.

ಕೃಷಿಕ ಗ್ರೆಗರಿ ಪತ್ರಾವೊ ಮಾತನಾಡಿ, ಪೆರ್ಮುದೆ ಕೃಷಿ ವಲಯ ಎಂಬುದಾಗಿ ಈಗಾಗಲೇ ಸರಕಾರ ಘೋಷಣೆ ಮಾಡಿದೆ. ಆದರೂ ಕೆಐಎಡಿಬಿ ಭೂಸ್ವಾಧೀನ ಕಾರ್ಯ ಕೈಗೆತ್ತಿಗೊಂಡಿದೆ. ಕಂಪೆನಿಯಲ್ಲಿ ಉದ್ಯೋಗ, ಒಳ್ಳೆಯ ಪರಿಹಾರ ಎಂದು ಹೇಳಿ ಮೋಸ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಭೂಸ್ವಾಧೀನಕ್ಕೆ ಸಮಿತಿಯನ್ನು ಮಾಡಿಕೊಂಡು ಜನರನ್ನು ಹೆದರಿಸುವ ಕೆಲಸ ನಡೆಯುತ್ತಿದೆ ಎಂದು ಎ.ವಿ.ಸುವಾರಿಸ್ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಜಗದೀಶ್, ಭೂಸ್ವಾಧೀನ ಪ್ರಕ್ರಿಯೆಗೆ ಕೆಐಎಡಿಬಿ ಯಾವುದೇ ಸಮಿತಿ ಮಾಡಿಲ್ಲ. ಮಾಡುವ ವ್ಯವಸ್ಥೆಯೂ ಇಲ್ಲವಾಗಿದ್ದು, ಅಂತಹ ಸಮಿತಿ ಇದ್ದರೆ ದೂರು ನೀಡಿದಲ್ಲಿ ಕ್ರಮ ಕೈಗೊ ಳ್ಳುವುದಾಗಿ ಹೇಳಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಶಾಂತರಾಜು, ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಎಚ್.ದಾಸೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News