ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದ ಕಾಪು ಈಗ ತಾಲೂಕು ಕೇಂದ್ರ
ಕಾಪು, ಮಾ.17: ಕಾಪು ಲೈಟ್‌ಹೌಸ್, ಶಂಕರಪುರ ಮಲ್ಲಿಗೆ, ಮಟ್ಟು ಗುಳ್ಳ ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಗಮನಸೆಳೆದ ಕಾಪು ಇದೀಗ ತಾಲೂಕು ಕೇಂದ್ರವಾಗಿ ಘೋಷಣೆಯಾಗುವ ಮೂಲಕ ಜನರಲ್ಲಿ ಸಂತಸ ಮನೆಮಾಡಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಕಾಪು ಬ್ರಿಟಿಷರ ಕಾಲದಲ್ಲಿಯೇ ಭೂ ಕಂದಾಯ ಕಚೇರಿಯನ್ನು ಹೊಂದಿತ್ತು. ಕಾಪು ತಾಲೂಕು ಪ್ರಸ್ತಾವಿತ 30ಕಂದಾಯ ಗ್ರಾಮಗಳನ್ನೊಳಗೊಂಡಿದೆ. 54,135.34 ಎಕರೆ ವಿಸ್ತೀರ್ಣ ಹೊಂದಿದ್ದು, 2011ರ ಜನಗಣತಿಯಂತೆ 1,36,074 ಜನಸಂಖ್ಯೆ ಹೊಂದಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದ ಕಾಪು ಪುರಸಭೆ, ಪಡುಬಿದ್ರೆ, ಎಲ್ಲೂರು, ಶಿರ್ವ, ಕುರ್ಕಾಲು ಸೇರಿದಂತೆ ನಾಲ್ಕು ಜಿಪಂ ಕ್ಷೇತ್ರ, 12 ತಾಪಂ ಹಾಗೂ 16 ಗ್ರಾಪಂಗಳನ್ನೊಳಗೊಂಡಿದೆ.
ಏಣಗುಡ್ಡೆ, ಕುರ್ಕಾಲು, ಬೆಳ್ಳೆ, ಕಟ್ಟಿಂಗೇರಿ, ಶಿರ್ವ, ಹೇರೂರು, ಮಜೂರು, ಇನ್ನಂಜೆ, ಪಾಂಗಾಳ, ಮೂಡುಬೆಟ್ಟು, ಕೋಟೆ, ಮಟ್ಟು, ಉಳಿಯಾರಗೋಳಿ, ಪಡು, ಮೂಳೂರು, ಬಡಾ, ತೆಂಕ, ಎಲ್ಲೂರು, ಬೆಳಪು, ಮಲ್ಲಾರು, ಪಾದೂರು, ಕಳತ್ತೂರು, ಕುತ್ಯಾರು, ಪಿಲಾರು, ಸಾಂತೂರು, ನಂದಿಕೂರು, ಪಾದೆಬೆಟ್ಟು, ನಡ್ಸಾಲು, ಪಲಿಮಾರು, ಹೆಜಮಾಡಿ ಕಂದಾಯ ಗ್ರಾಮಗಳು ತಾಲೂಕು ವ್ಯಾಪ್ತಿಗೆ ಬರಲಿವೆ. ಅಲ್ಲದೆ ಪಕ್ಕದ ತಾಲೂಕಿನ ಗ್ರಾಮಗಳು ಕಾಪು ತಾಲೂಕಿಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ಪ್ರಸ್ತಾವನೆ ಇತ್ತು:
ಸಂತ ವಿ.ಸಾಲ್ಯಾನ್ ಸಚಿವರಾಗಿದ್ದಾಗ ಕಾಪು ತಾಲೂಕು ರಚನೆಯ ಕೂಗು ಕೇಳಿಬಂದಿತ್ತು. ಇದೇ ವೇಳೆ ಕಾಪು ತಾಲೂಕು ರಚನೆಗೆ ಎಂ.ಪಿ.ಪ್ರಕಾಶ್ ಕಂದಾಯ ಸಚಿವರಾಗಿದ್ದಾಗ ಕಾಪುವಿನಲ್ಲಿ ವಿಶೇಷ ತಹಶೀಲ್ದಾರ್ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಕಳೆದ ಒಂದು ವರ್ಷದ ಹಿಂದೆ ಕಾಪು ಶಾಸಕ ವಿನಯಕುಮಾರ್ ಸೊರಕೆ ತಾಲೂಕು ರಚನೆಗೆ ಹೆಚ್ಚಿನ ಮುತುವರ್ಜಿ ವಹಿಸಿ ಹೋರಾಟವನ್ನೂ ರೂಪಿಸಿದ್ದರು. ಸಾಮಾಜಿಕ ಕಾರ್ಯಕರ್ತ ಲೀಲಾಧರ ಶೆಟ್ಟಿ ಅವರ ನೇತೃತ್ವದಲ್ಲಿ ಹೋರಾಟ ಸಮಿತಿ ರಚಿಸಿ ಕಾಲ್ನಡಿಗೆ ಜಾಥಾ, ಬೈಕ್ ರ್ಯಾಲಿ, ಗ್ರಾಪಂಗಳಿಗೆ ಭೇಟಿ ನೀಡಿ ಜನಜಾಗೃತಿ ಮೂಡಿಸಿ ಜನಾಭಿಪ್ರಾಯವನ್ನು ಕ್ರೋಡೀಕರಿಸಿ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದರು ಹಾಗೂ ಇದೀಗ ತಾಲೂಕು ಘೋಷಣೆ ಮಾಡುವಲ್ಲಿ ಸಫಲರಾದರು ಎನ್ನಬಹುದು.
ಇಲಾಖೆಗಳು:
ಲೂಕು ಕಾರ್ಯಗತವಾದರೆ ಪ್ರತ್ಯೇಕ ತಾಪಂ, ಎಪಿಎಂಸಿಗಳು ರಚನೆಯಾಗಲಿವೆ. ಕಾಪು, ಶಿರ್ವ ಹಾಗೂ ಪಡುಬಿದ್ರೆ ಹೋಬಳಿ ಕೇಂದ್ರಗಳಾಗಲಿವೆ. ಕಾಪು ಬಂಗ್ಲೆ ಪ್ರದೇಶದಲ್ಲಿ ಈಗಿರುವ ನಾಡ ಕಚೇರಿ ಸಮೀಪದಲ್ಲಿ ಸಾಕಷ್ಟು ಸ್ಥಳವಿದ್ದು ತಾಲೂಕು ಕಚೇರಿ ನಿರ್ಮಾಣಕ್ಕೆ ಅನುಕೂಲಕರವಾಗಿದೆ. ಪುರಸಭೆ, ನಗರ ಯೋಜನಾ ಪ್ರಾಧಿಕಾರ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಕೃಷಿ, ಪಶು ಸಂಗೋಪನಾ ಇಲಾಖೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಂದಾಯ, ಉಪನೋಂದಣಿ ಕಚೇರಿ, ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ, ನ್ಯಾಯಾಲಯ, ತೋಟಗಾರಿಕೆ ಪ್ರಮುಖವಾಗಿ ಆಗಬೇಕಿದ್ದು, ರಾಜ್ಯಪತ್ರದಲ್ಲಿ ಶೀಘ್ರ ಅನುಷ್ಠಾನಗೊಂಡಲ್ಲಿ ಆರು ತಿಂಗಳಲ್ಲಿ ತಾಲೂಕು ಕಾರ್ಯಗತವಾಗಲಿದೆ.
ಶೈಕ್ಷಣಿಕ ಸಂಸ್ಥೆಗಳು:
ಬಂಟಕಲ್‌ನಲ್ಲಿ ಸೋದೆ ವಾದಿರಾಜ ಮಠಕ್ಕೆ ಸೇರಿದ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಕಾಪು ವಿದ್ಯಾನಿಕೇತನದ ವಿದ್ಯಾ ನರ್ಸಿಂಗ್ ಹಾಗೂ ಪ್ರಶಾಂತ್ ಆಸ್ಪತ್ರೆಯ ನರ್ಸಿಂಗ್ ಕಾಲೇಜುಗಳಿವೆ. ಕಾಪುವಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಲ್ಲದೆ ಸ್ನಾತಕೋತ್ತರ ಅಧ್ಯಯನ ಕೇಂದ್ರವಿದೆ. ಶಿರ್ವದಲ್ಲಿ ಸೈಂಟ್ ಮೇರಿ ಹಾಗೂ ಮೂಲ್ಕಿ ಸುಂದರಾಮ್ ಶೆಟ್ಟಿ ಪ್ರಥಮ ದರ್ಜೆ ಕಾಲೇಜು, ಬೆಳಪುವಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆ ಕಾರ್ಯ ನಡೆಯುತ್ತಿದೆ. ಎಲ್ಲೂರಿನಲ್ಲಿ ಐಟಿಐ ಸ್ಥಾಪನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೈಕ್ಷಣಿಕವಾಗಿ ವಿಶೇಷ ಗಮನಸೆಳೆದಿದೆ.
ಉದ್ದಿಮೆಗಳು:
ಕಾಪು ತಾಲೂಕು ವ್ಯಾಪ್ತಿಯಲ್ಲಿ ಕೇಂದ್ರ ಸರಕಾರ ಅಧೀನದ ಪಾದೂರು ಕಚ್ಚಾ ತೈಲ ಶೇಖರಣ ಘಟಕ (ಐಎಸ್‌ಪಿಆರ್‌ಎಲ್), ಎಲ್ಲೂರಿನಲ್ಲಿ ಅದಾನಿ-ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರ ಹಾಗೂ ಪಡುಬಿದ್ರೆಯಲ್ಲಿ ಗಾಳಿಯಂತ್ರದ ಮೂಲಕ ವಿದ್ಯುತ್ ಉತ್ಪಾದನೆಯ ಬಿಡಿಭಾಗ ತಯಾರಿಕಾ ಘಟಕ ಸುಜ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿ ಹಾಗೂ ನಂದಿಕೂರು ಹಾಗೂ ಬೆಳಪುವಿನಲ್ಲಿ ಕೈಗಾರಿಕಾ ಪ್ರದೇಶಗಳ ನಿರ್ಮಾಣದಿಂದ ಸಣ್ಣ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಅನೂಕೂಲಕರವಾಗಿದೆ.
ಕೃಷಿ:
ಶಂಕರಪುರ ಮಲ್ಲಿಗೆ, ಮಟ್ಟುಗುಳ್ಳ ಈ ಎರಡು ಪ್ರಮುಖ ಬೆಳೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಛಾಪನ್ನು ಮೂಡಿಸಿವೆ. ಹೆಜಮಾಡಿಯ ಕೋಡಿಯಲ್ಲಿ ನನೆಗುದಿಗೆ ಬಿದ್ದಿರುವ್ದ ಮೀನುಗಾರಿಕಾ ಬಂದರು ತಾಲೂಕು ರಚನೆಯಿಂದ ಬಂದರು ನಿರ್ಮಾಣಕ್ಕೆ ಇನ್ನಷ್ಟು ವೇಗ ಸಿಗುವ ಬಗ್ಗೆ ಮೀನುಗಾರರು ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಮೀನುಗಾರಿಕೆ, ಭತ್ತ, ತೆಂಗು, ಅಡಿಕೆ ಪ್ರಮುಖ ಕೃಷಿ ಉತ್ಪನ್ನಗಳಾಗಿವೆ.
ಕೈಬೀಸಿ ಕರೆಯುವ ಲೈಟ್‌ಹೌಸ್:
ಕಾಪುವಿನಲ್ಲಿ ಬ್ರಿಟಿಷರ ಕಾಲದಲ್ಲಿ ನಿಮಾರ್ಣಗೊಂಡ ಲೈಟ್‌ಹೌಸ್ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದಲ್ಲದೆ ಪಡುಬಿದ್ರೆ ಬೀಚ್, ಸಸಿಹಿತ್ಲು-ಹೆಜಮಾಡಿ ಸರ್ಫಿಂಗ್ ತಾಣ, ಉಡುಪಿಯ ಕೃಷ್ಣಮಠಕ್ಕೆ ಸಂಬಂಧ ಹೊಂದಿರುವ ದಂಡತೀರ್ಥ ಮಠ, ಕುಂಜಾರುವಿನಲ್ಲಿರುವ ಮಧ್ವಚಾರ್ಯರ ಜನ್ಮಸ್ಥಾನ ಪಾಜಕ ಕ್ಷೇತ್ರ, ಕಾಪುವಿನಲ್ಲಿ ಮೂರು ಮಾರಿಗುಡಿಗಳು, ಪಡುಬಿದ್ರೆಯ ಬ್ರಹ್ಮಸ್ಥಾನ, ಕನ್ನಂಗಾರ್ ಜುಮಾ ಮಸೀದಿ ಹಾಗೂ ದರ್ಗಾ, ಕಟಪಾಡಿ ದರ್ಗಾ, ಶಿರ್ವ ಚರ್ಚ್ ಸೇರಿದಂತೆ ಪ್ರಮುಖ ಪ್ರವಾಸಿ ಕೇಂದ್ರಗಳು ಇಲ್ಲಿವೆ.