ತೊಕ್ಕೊಟ್ಟು ಮಸೀದಿಗೆ ಕಲ್ಲೆಸೆತ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಆರೋಪಿ

Update: 2017-03-18 14:34 GMT

ಉಳ್ಳಾಲ, ಮಾ.18: ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯ ರೈಲ್ವೆ ಹಳಿ ಸಮೀಪವಿರುವ ಮಸ್ಜಿದುಲ್ ಹುದಾ ಮಸೀದಿಗೆ ಕಿಡಿಗೇಡಿಯೋರ್ವ ಕಲ್ಲೆಸೆದು ಹಾನಿಗೊಳಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಕಲ್ಲೆಸೆದ ಆರೋಪಿಯನ್ನು ಕೂಡಲೇ ಸ್ಥಳೀಯರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ತೊಕ್ಕೊಟ್ಟು ಭಟ್ನಗರ ನಿವಾಸಿ ಸಾಗರ್(22) ಎಂಬಾತನೇ ಮಸೀದಿಗೆ ಕಲ್ಲು ಎಸೆದ ಆರೋಪಿಯಾಗಿದ್ದಾನೆ.

ಶುಕ್ರವಾರ ರಾತ್ರಿ 11ರ ವೇಳೆಗೆ ಮಸೀದಿಯೊಳಗೆ ಧರ್ಮಗುರುಗಳಿದ್ದ ಸಂದರ್ಭ ತೊಕ್ಕೊಟ್ಟು ಒಳಪೇಟೆಯಿಂದ ರೈಲ್ವೇ ಮೇಲ್ಸೇತುವೆಯ ಕೆಳಗಿನಿಂದ ಬಂದ ಸಾಗರ್ ಕಲ್ಲುಗಳನ್ನು ಮಸೀದಿ ಕಟ್ಟಡದ ಗಾಜಿಗೆ ಎಸೆದು ಪರಾರಿಯಾಗಿದ್ದ ಎನ್ನಲಾಗಿದೆ.

ಈ ಸಂಧರ್ಭ ಗಾಬರಿಗೊಂಡ ಧರ್ಮಗುರುಗಳು ಮಸೀದಿಯಿಂದ ಹೊರಗಡೆ ಓಡಿಬಂದಿದ್ದರು. ತೊಕ್ಕೊಟ್ಟಿನಲ್ಲಿ ವ್ಯವಹಾರ ಮುಗಿಸಿ ಬರುತ್ತಿದ್ದ ವರ್ತಕರು ಧರ್ಮಗುರುಗಳಲ್ಲಿ ವಿಚಾರಿಸಿದಾಗ ಮಸೀದಿಗೆ ಕಲ್ಲು ಎಸೆದು ಹಾನಿಗೊಳಿಸಿದ ಬಗ್ಗೆ ಹೇಳಿದ್ದಾರೆ.

ಸ್ಥಳೀಯರಯ ಕೂಡಲೇ ಮಸೀದಿ ಆವರಣದಲ್ಲಿ ಹುಡುಕಾಡಿದಾಗ ಅಲ್ಲೇ ಅವಿತು ಕುಳಿತಿದ್ದ ಸಾಗರ್ ಅಲ್ಲಿಂದ ಓಡಲು ಆರಂಭಿಸಿದ್ದ. ಆತನನ್ನು ಬೆನ್ನತಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ತೊಕ್ಕೊಟ್ಟಿನಲ್ಲೇ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನವು ತಕ್ಷಣವೇ ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿ ಠಾಣೆಗೆ ಕೊಂಡೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಎಸಿಪಿ ಶೃತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿಯ ಜೇಬಲ್ಲಿ ಗಾಂಜಾ...!

ಮಸೀದಿಗೆ ಕಲ್ಲು ಎಸೆದು ಬಂಧಿತನಾದ ಆರೋಪಿ ಸಾಗರ್ ಜೇಬಲ್ಲಿ ಗಾಂಜಾ ಮತ್ತು ಇನ್ನಷ್ಟು ಕಲ್ಲುಗಳು ಪತ್ತೆಯಾಗಿದೆ ಎಂದು ಹೇಳಲಾಗಿದೆ. ತೊಕ್ಕೊಟ್ಟು ಪರಿಸರದಲ್ಲಿ ಇತ್ತೀಚೆಗೆ ಗಾಂಜಾ ಹಾಗೂ ಇನ್ನಿತರ ವ್ಯಸನಿಗಳ ಹಾವಳಿ ಹೆಚ್ಚಾಗುತ್ತಿದ್ದು ಇದರಿಂದಾಗಿಯೇ ಈ ಪರಿಸರದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿವೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News