×
Ad

ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿದ ರಿಕ್ಷಾ ಚಾಲಕರು..!

Update: 2017-03-18 18:34 IST

ಮಂಗಳೂರು, ಮಾ.18: ವಾಹನ ಸಂಚಾರ ಮಾತ್ರವಲ್ಲದೆ, ಸಾರ್ವಜನಿಕರು ಓಡಾಡಲೂ ಅಯೋಗ್ಯವಾದ ಈ ರಸ್ತೆ ಬಗ್ಗೆ ಪ್ರತಿಭಟನೆ, ರಸ್ತೆ ತಡೆ, ಮನವಿ ನೀಡಿ ಸುಸ್ತಾಗಿ ತಾವೇ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿದ್ದಾರೆ ಈ ರಿಕ್ಷಾ ಚಾಲಕರು.

ಹೇಳಿ ಕೇಳಿ ಇದು ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆ. ಮಂಗಳೂರು ತಾಲೂಕು ಪಂಚಾಯತ್ ಕಚೇರಿ ಹಾಗೂ ಪೊಲೀಸ್ ವಸತಿ ಗೃಹದ ನಡುವೆ ಹಾದು ಹೋಗುವ ಈ ರಸ್ತೆ ಹೊಂಡಗಳಿಂದ ತುಂಬಿ, ಸಾಕಷ್ಟು ಬಾರಿ ರಸ್ತೆ ದುರಸ್ತಿಗಾಗಿ ಸಂಸದರು, ಶಾಸಕರು, ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯ ಕಾರ್ಪೊರೇಟರ್‌ಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.

ಕೊನೆಗೆ ತಮ್ಮ ಪ್ರಾಣ ರಕ್ಷಣೆ ಹಾಗೂ ತಮ್ಮ ಕುಟುಂಬವನ್ನು ಸಲಹುವ ಆಟೋರಿಕ್ಷಾಗಳಾದರೂ ಸಹಜ ಸ್ಥಿತಿಯಲ್ಲಿರಲಿ ಎಂಬ ನೆಲೆಯಲ್ಲಿ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ದುಡಿಯುವ ರಿಕ್ಷಾ ಚಾಲಕರು ಇಂದು ತಾವೇ ಸ್ವಂತ ಖರ್ಚಿನಲ್ಲಿ ದುರಸ್ತಿ ಕಾರ್ಯ ನಡೆಸಿದರು.

ಎರಡು ಟಿಪ್ಪರ್ ಲಾರಿ ಮಣ್ಣನ್ನು ತರಿಸಿ, ಸುಮಾರು 20ರಷ್ಟು ಚಾಲಕರು ಸೇರಿ ಈ ರಸ್ತೆಯ ಹೊಂಡ ಗುಂಡಿಗಳನ್ನು ಮುಚ್ಚಿದರು.

'ನಾವು ಸುಮಾರು ಕಳೆದ ಎರಡು ವರ್ಷಗಳಿಂದೀಚೆಗೆ ಈ ರಸ್ತೆ ದುರಸ್ತಿಗಾಗಿ ನಿರಂತರವಾಗಿ ಸ್ಥಳೀಯ ಸಂಸದರು, ಶಾಸಕರು, ಕಾರ್ಪೊರೇಟರ್, ಮೇಯರ್, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಿ ದುರಸ್ತಿಗೆ ಆಗ್ರಹಿಸಿದ್ದೇವೆ. ಆದರೆ ಪ್ರತಿಫಲ ಶೂನ್ಯ. ಕಳೆದ ವಾರ ಈ ರಸ್ತೆ ತಡೆ ಮಾಡಿಯೂ ನಮ್ಮ ನೋವನ್ನು ಸಂಬಂಧಪಟ್ಟವರಿಗೆ ತಿಳಿಸುವ ಪ್ರಯತ್ನ ಮಾಡಿದೆವು. ಆದರೂ ಪ್ರಯೋಜನವಾಗಿಲ್ಲ. ಹಾಗಾಗಿ ಕೊನೆಗೆ ನಾವೇ ಸೋತು, ನಮ್ಮ ಸ್ವಂತ ಖರ್ಚಿನಲ್ಲಿ ಮಣ್ಣು ತರಿಸಿ, ನಮ್ಮ ಕೆಲಸ ಬಿಟ್ಟು ಮಣ್ಣು ಮುಚ್ಚುವ ಕಾರ್ಯ ಮಾಡುತ್ತಿದ್ದೇವೆ' ಎಂದು ಮಂಗಳೂರು ರಿಕ್ಷಾ ಚಾಲಕರ ಹೋರಾಟ ಸಮಿತಿಯವರಾದ, ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ರಿಕ್ಷಾ ಚಾಲಕರೂ ಆಗಿರುವ ಅಬ್ದುಲ್ ಮಜೀದ್ 'ವಾರ್ತಾಭಾರತಿ'ಗೆ ತಿಳಿಸಿದರು.

ದೇಶದ ವಿವಿಧ ಕಡೆಗಳಿಂದ ಮಂಗಳೂರನ್ನು ಬೆಸೆಯುವ ರೈಲ್ವೇ ನಿಲ್ದಾಣ ಕೇಂದ್ರವನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ದುಸ್ಥಿತಿ ಇದು. ಈ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ, ತ್ರಿಚಕ್ರ ಹಾಗೂ ಚತುಷ್ಚಕ್ರ ವಾಹನಗಳು ಓಡಾಡುತ್ತವೆ. ಸಾಕಷ್ಟು ಅಪಘಾತಗಳು ಇಲ್ಲಿ ಸಂಭವಿಸಿವೆ. ದ್ವಿಚಕ್ರ ವಾಹನ ಸವಾರರಂತೂ ಈ ರಸ್ತೆಯಲ್ಲಿ ಓಡಾಡಲೂ ಭಯ ಪಡುತ್ತಾರೆ.

ಈ ರಸ್ತೆಯ ದುಸ್ಥಿತಿಯಿಂದಾಗಿ ಅದಾಗಲೇ ಹಲವು ಸವಾರರು ರಸ್ತೆಯಲ್ಲಿನ ಹೊಂಡಕ್ಕೆ ಸಿಲುಕಿ ಕೈಕಾಲು ಮೂಳೆ ಮುರಿತಕ್ಕೂ ಒಳಗಾಗಿದ್ದಾರೆ. ಅತ್ತ ಮಹಾನಗರ ಪಾಲಿಕೆ, ಇತ್ತ ರೈಲ್ವೇ ಇಲಾಖೆಯ ಕಡೆಗಣನೆಯಿಂದಾಗಿ ವಾಹನ ಸವಾರರು ಮಾತ್ರ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಈ ರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News