ಟ್ರಂಪ್ ಸಂಪುಟ ಸದಸ್ಯನ ವಿರುದ್ಧ ತನಿಖೆಯಲ್ಲಿ ತೊಡಗಿದ್ದಾಗ ಪ್ರೀತ್ ಭರಾರ ಉಚ್ಚಾಟನೆ
ವಾಶಿಂಗ್ಟನ್, ಮಾ. 18: ಅಮೆರಿಕದ ಆರೋಗ್ಯ ಮತ್ತು ಮಾನವೀಯ ಸೇವೆಗಳ ಇಲಾಖೆಯ ಕಾರ್ಯದರ್ಶಿ ಟಾಮ್ ಪ್ರೈಸ್, ಆರೋಗ್ಯ ಸಂಬಂಧಿ ಶೇರುಗಳ ವಿಕ್ರಯ ನಡೆಸಿದ್ದಾರೆ ಎಂಬ ಆರೋಪಗಳ ಬಗ್ಗೆ ಭಾರತೀಯ ಅಮೆರಿಕನ್ ಅಟಾರ್ನಿ ಪ್ರೀತ್ ಭರಾರ ತನಿಖೆ ನಡೆಸುತ್ತಿದ್ದರು ಎಂದು ತನಿಖಾ ಸುದ್ದಿ ಸಂಸ್ಥೆ ‘ಪ್ರೊಪಬ್ಲಿಕಾ’ ವರದಿ ಮಾಡಿದೆ.
ಇತ್ತೀಚೆಗೆ ಭರಾರ ಅವರನ್ನು ಟ್ರಂಪ್ ಆಡಳಿತವು ಸೇವೆಯಿಂದ ವಜಾಗೊಳಿಸಿದೆ.ಉಚ್ಚಾಟನೆಗೊಳ್ಳುವ ಸಮಯದಲ್ಲಿ ಭರಾರ, ಟಾಮ್ ಪ್ರೈಸ್ ನಡೆಸಿರುವ ಆರೋಗ್ಯ ಸಂಬಂಧಿ ಶೇರುಗಳ ವಿಕ್ರಯ ಕುರಿತ ತನಿಖೆಯ ಉಸ್ತುವಾರಿಯನ್ನು ಹೊತ್ತಿದ್ದರು ಎಂದು ನ್ಯೂಯಾರ್ಕ್‌ನ ಸ್ವತಂತ್ರ ಹಾಗೂ ಲಾಭರಹಿತ ಪತ್ರಿಕೆ ಹೇಳಿದೆ.
ಹಿಂದಿನ ಬರಾಕ್ ಒಬಾಮ ಆಡಳಿತದಿಂದ ನೇಮಿಸಲ್ಪಟ್ಟಿರುವ ಭರಾರ ಮತ್ತು ಅಮೆರಿಕದ ಇತರ 45 ಅಟಾರ್ನಿಗಳು ರಾಜೀನಾಮೆ ನೀಡುವಂತೆ ಕಾನೂನು ಇಲಾಖೆ ಸೂಚಿಸಿತ್ತು. ಆದರೆ, ಭರಾರ ರಾಜೀನಾಮೆ ಸಲ್ಲಿಸಲು ನಿರಾಕರಿಸಿದ್ದರು. ಬಳಿಕ, ಟ್ರಂಪ್ ಆಡಳಿತವು ಅವರನ್ನು ಸೇವೆಯಿಂದ ವಜಾಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.
ಆದಾಗ್ಯೂ, ಪ್ರೈಸ್ ವಿರುದ್ಧ ತನಿಖೆ ನಡೆಸಿರುವುದಕ್ಕಾಗಿ ಭರಾರ ಅವರನ್ನು ಉಚ್ಚಾಟಿಸಲಾಗಿದೆ ಎಂಬ ನಿರ್ಧಾರಕ್ಕೆ ಪ್ರೊಪಬ್ಲಿಕಾ ಬಂದಿಲ್ಲ.
ಪ್ರೈಸ್ ಆರೋಗ್ಯ ಸಂಬಂಧಿ ಶೇರುಗಳನ್ನು ವಿಕ್ರಯಿಸಿದ ಆರೋಪಗಳು, ಆರೋಗ್ಯ ಮತ್ತು ಮಾನವೀಯ ಸೇವೆಗಳ ಕಾರ್ಯದರ್ಶಿ ಹುದ್ದೆಗೆ ಅವರ ಸಂದರ್ಶನದ ವೇಳೆ ಕೇಳಿಬಂದಿದ್ದವು.
‘‘ಭರಾರ ಉಚ್ಚಾಟನೆಯ ವೇಳೆ, ಸದರ್ನ್ ಡಿಸ್ಟ್ರಿಕ್ಟ್ ಆಫ್ ನ್ಯೂಯಾರ್ಕ್‌ನ ಅಟಾರ್ನಿ ಕಚೇರಿಯು ಪ್ರೈಸ್‌ರ ಶೇರು ವಿಕ್ರಯಗಳ ಬಗ್ಗೆ ತನಿಖೆ ನಡೆಸುತ್ತಿತ್ತು ಎಂಬುದಾಗಿ ವ್ಯಕ್ತಿಯೊಬ್ಬರು ಹೇಳಿದ್ದಾರೆ’’ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.