ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಶೀಘ್ರ ಆರಂಭ: ಲೋಬೊ
ಮಂಗಳೂರು, ಮಾ.18: ರಾಜ್ಯ ಬಜೆಟ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ 150 ಕೋ.ರೂ. ಮೀಸಲಿರಿಸಿದೆ. ಹಾಗಾಗಿ ಕೇಂದ್ರ ಸರಕಾರದಿಂದಲೂ 150 ಕೋ.ರೂ. ಬಿಡುಗಡೆಗೊಳ್ಳಲಿದೆ. 300 ಕೋ.ರೂ. ಅನುದಾನದಲ್ಲಿ ಕಾಮಗಾರಿಗಳು ಶೀಘ್ರ ಆರಂಭಗೊಳ್ಳಲಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಗೆ ಮಂಗಳೂರು ಮಾತ್ರ ಆಯ್ಕೆಯಾಗಿದೆ. ಆದರೆ ಈವರೆಗೆ ಯಾವುದೇ ಕಾಮಗಾರಿ ಆರಂಭಗೊಂಡಿಲ್ಲ. ಯೋಜನೆ ಅನುಷ್ಠಾನಕ್ಕೆ ಬೇಕಾದ ಅಧಿಕಾರಿಗಳು ನೇಮಕಗೊಂಡು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗ ಮಂಡಿಸಿದ ಬಜೆಟ್ ಎಲ್ಲರ ನಿರೀಕ್ಷೆಗೆ ಮೀರಿದೆ. ಜನರ ಮೂಲಭೂತ ಆವಶ್ಯಕತೆಗಳನ್ನು ಕಲ್ಪಿಸಿ ಅಭಿವೃದ್ಧಿಗೆ ಆದ್ಯತೆ ನೀಡಿದೆ. ನೀರಾ ನೀತಿ, ಮೀನುಗಾರಿಕಾ ಬಂದರು ಅಭಿವೃದ್ಧಿ, ವೆನ್ಲಾಕ್ ಆಸ್ಪತ್ರೆ ಮೇಲ್ದರ್ಜೆಗೆ, ಅನಿವಾಸಿ ಕನ್ನಡಿಗರಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ, ಸರ್ಫಿಂಗ್ ಉತ್ಸವ ಇತ್ಯಾದಿಗೆ ಮನ್ನಣೆ ನೀಡಿದೆ ಎಂದು ಶಾಸಕ ಜೆ.ಆರ್.ಲೋಬೊ ನುಡಿದರು.
ನೇತ್ರಾವತಿ ಸೇತುವೆಯಿಂದ ಹಳೆ ಬಂದರು, ಸುಲ್ತಾನ್ ಬತ್ತೇರಿ ಮೂಲಕ ಸಾಗಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ 'ಸಾಗರ ಮಾಲಾ' ಯೋಜನೆ ಅನುಷ್ಠಾನ, ಕಣ್ಣೂರುನಿಂದ ನೇತ್ರಾವತಿ ನದಿ ತೀರದ ಉಳ್ಳಾಲ ಸೇತುವೆ ತನಕ 6.5 ಕಿ.ಮೀ. ಬೈಪಾಸ್ ರಸ್ತೆ ನಿರ್ಮಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸರಕಾರ ಭರವಸೆ ನೀಡಿದೆ. ಱಸಾಗರ ಮಾಲೞಯೋಜನೆ ಅನುಷ್ಠಾನವಾದರೆ ಸುಲ್ತಾನ್‌ಬತ್ತೇರಿ ತೂಗು ಸೇತುವೆ ಯೋಜನೆ ರದ್ದುಗೊಳ್ಳಲಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜೆ.ಆರ್.ಲೋಬೊ ಹೇಳಿದರು.
ದೇಶದ ಮೊದಲ 18 ಮೀ. ವ್ಯಾಸದ ಗೋಲ 3ಡಿ ತಾರಾಲಯ ಪಿಲಿಕುಳದಲ್ಲಿ 35.65 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಇದಕ್ಕೆ ಬೇಕಾದ ಅನುದಾನ ಮಂಜೂರುಗೊಂಡಿದೆ. ಅಂತಾರಾಷ್ಟ್ರೀಯ ಟೆಂಡರ್ ಕರೆದು ಆಗಿ ಕಾಮಗಾರಿ ನಡೆಸಲು ಆದೇಶಿಸಲಾಗಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಪಶ್ಚಿಮ ವಾಹಿನಿ ಯೋಜನೆಗೆ 100 ಕೋ.ರೂ. ಮೀಸಲಿಡಲಾಗಿದೆ. ಸಮರ್ಪಕ ಅನುಷ್ಠಾನಕ್ಕೆ 1 ಸಾವಿರ ಕೋ.ರೂ. ಆವಶ್ಯಕತೆಯಿದೆ. ಈ ಮೂಲಕ ಅಂತರ್ಜಲ, ಕುಡಿಯುವ ನೀರು, ಬೇಸಾಯಕ್ಕೆ ನೀರಿನ ಸಮಸ್ಯೆ ನೀಗಲಿದೆ. ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಗೆ 285 ಎಕರೆ ಜಮೀನು ಸ್ವಾಧೀನಕ್ಕೆ ಸರಕಾರ ಅನುದಾನ ನೀಡಿದೆ. ಲೋಕೋಪಯೋಗಿ ಮೂಲಕ ಕಾವೂರಿನಿಂದ ಬಜ್ಪೆ ತನಕ ಚತುಷ್ಪಥ ರಸ್ತೆ ಹಾಗೂ ಮರವೂರಿನಲ್ಲಿ ಸೇತುವೆ ನಿರ್ಮಾಣವಾಗಲಿದೆ. ಇದಕ್ಕಾಗಿ 50 ಕೋ.ರೂ.ಅನುದಾನ ಮೀಸಲಿಟ್ಟಿದೆ ಎಂದು ಜೆ.ಆರ್. ಲೊಬೊ ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯ ನೇತೃತ್ವದಲ್ಲಿ ಕರಾವಳಿಯ ಎಲ್ಲ ಶಾಸಕರು ಮುಖ್ಯಮಂತ್ರಿಗೆ ಮಾಡಿದ ಮನವಿ ಮೇರೆಗೆ ಬಜೆಟ್‌ನಲ್ಲಿ ಉತ್ತಮ ಕೊಡುಗೆ ಸಿಕ್ಕಿದೆ ಎಂದು ಜೆ.ಆರ್. ಲೋಬೊ ಹೇಳಿದರು.
ಕಾಂಗ್ರೆಸ್ ಹಂಗಾಮಿ ಜಿಲ್ಲಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್ ಕಾಪಿಕಾಡ್, ಪಕ್ಷದ ಮುಖಂಡರಾದ ವಿಶ್ವಾಸ್ ಕುಮಾರ್ ದಾಸ್, ಸಲೀಂ, ಸಂತೋಷ್ ಕದ್ರಿ, ಪ್ರವೀಣ್‌ಚಂದ್ರ ಆಳ್ವ, ಎ.ಸಿ.ವಿನಯರಾಜ್, ಟಿ.ಕೆ.ಸುಧೀರ್ ಉಪಸ್ಥಿತರಿದ್ದರು.