ನಾಪತ್ತೆಯಾಗಿದ್ದ ದಿಲ್ಲಿಯ ಧರ್ಮಗುರುಗಳಿಬ್ಬರು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ವಶದಲ್ಲಿ
ಲಾಹೋರ,ಮಾ.18: ಇಲ್ಲಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ದಿಲ್ಲಿಯ ಹಜರತ್ ನಿಝಾಮುದ್ದೀನ್ ದರ್ಗಾದ ಧರ್ಮಗುರುಗಳಿಬ್ಬರು ಮುತ್ತಹಿದಾ ಕೌಮಿ ಮೂವ್‌ಮೆಂಟ್ (ಎಂಕ್ಯೂಎಂ)ನೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ವಶದಲ್ಲಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿದವು.
ಹಝರತ್ ನಿಝಾಮುದ್ದೀನ್ ಔಲಿಯಾ ದರ್ಗಾದ ಮುಖ್ಯ ಧರ್ಮಗುರು ಸೈಯದ್ ಆಸಿಫ್ ನಿಝಾಮಿ (80) ಮತ್ತು ಅವರ ಸೋದರ ಪುತ್ರ ನಝಿಮ್ ನಿಝಾಮಿ ಅವರು ಮಾ.14ರಂದು ಇಲ್ಲಿಯ ಅಲ್ಲಾಮಾ ಇಕ್ಬಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರಾಚಿಗೆ ತೆರಳಲೆಂದು ಶಹೀನ್ ಏರ್‌ಲೈನ್ಸ್‌ನ ವಿಮಾನವನ್ನು ಹತ್ತಿದ್ದು, ಅವರನ್ನು ವಿಮಾನದಿಂದ ಕೆಳಗಿಳಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿದವು.
ಎಂಕ್ಯೂಎಂ ಮುಖ್ಯಸ್ಥ ಅಲ್ತಾಫ ಹುಸೇನ್ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಅವರಿಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದೂ ಅವು ಹೇಳಿದವು.
ಕರಾಚಿಯಲ್ಲಿ ಅಲ್ತಾಫ್‌ರ ಪಕ್ಷದವರೊಂದಿಗೆ ಅವರು ನಂಟು ಹೊಂದಿದ್ದಾರೆ ಎಂಬ ಆರೋಪದ ಕುರಿತು ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗಿದ್ದು, ಆರೋಪವು ಸಿದ್ಧವಾಗದಿದ್ದರೆ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದೂ ಈ ಮೂಲಗಳು ಹೇಳಿದವು.
1980ರ ದಶಕದಲ್ಲಿ ಪ್ರಮುಖವಾಗಿ ಜನಾಂಗೀಯ ಪಕ್ಷವಾಗಿ ಅಸ್ತಿತ್ವಕ್ಕೆ ಬಂದಿದ್ದ ಎಂಕ್ಯೂಎಂ 1947ರ ವಿಭಜನೆ ವೇಳೆ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ್ದ ಉರ್ದು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಸಿಂಧ್ ಪ್ರಾಂತ್ಯದ ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಕರಾಚಿ, ಹೈದರಾಬಾದ್, ಮೀರ್‌ಪುರ್ಖಾಸ್ ಮತ್ತು ಸುಕ್ಕುರ್‌ಗಳಲ್ಲಿ ರಾಜಕೀಯ ಪ್ರಾಬಲ್ಯ ಹೊಂದಿದೆ.
ಆಸಿಫ್ ನಿಝಾಮಿ ಕರಾಚಿಯಲ್ಲಿರುವ ತನ್ನ ಸೋದರಿಯನ್ನು ನೋಡಲೆಂದು ಅಲಿ ನಿಝಾಮಿ ಜೊತೆ ಮಾ.8ರಂದು ಪಾಕಿಸ್ತಾನಕ್ಕೆ ಆಗಮಿಸಿದ್ದರು. ಮಾ.13ರಂದು ಲಾಹೋರಕ್ಕೆ ಆಗಮಿಸಿದ್ದ ಅವರು ಪಾಕ್‌ಪಟ್ಟಣ್‌ನಲ್ಲಿರುವ ಸೂಫಿ ಸಂತ ಬಾಬಾ ಫರೀದ್ ಗಂಗ್ ಅವರ ದರ್ಗಾಕ್ಕೆ ಭೇಟಿ ನೀಡಿದ್ದರು. ಮಾ.14ರಿಂದ ಇಬ್ಬರೂ ನಾಪತ್ತೆಯಾಗಿದ್ದರು.