ದಾರಿ ಮಧ್ಯೆ ಮಹಿಳೆಯನ್ನು ಬಸ್‌ನಿಂದ ಇಳಿಸಿದ ಕಂಡಕ್ಟರ್: ಮಹಿಳೆಗೆ ಸ್ಪಂದಿಸಿದ ಪೊಲೀಸ್‌ಗೆ ಕಮಿಷನರ್‌ರಿಂದ ಬಹುಮಾನ

Update: 2017-03-18 16:51 GMT

ಮಂಗಳೂರು, ಮಾ. 18: ಮಂಗಳಾದೇವಿ ಕಡೆಗೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಬಸ್ ಕಂಡಕ್ಟರ್ ಕಂಕನಾಡಿಯಲ್ಲಿ ಇಳಿಸಿದ್ದ ಬಗ್ಗೆ ಮಹಿಳೆ ನೀಡಿರುವ ದೂರಿಗೆ ಸ್ಪಂದಿಸಿದ ಪೊಲೀಸ್‌ಗೆ ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು ಶ್ಲಾಘನೆ ವ್ಯಕ್ತಪಡಿಸಿ 5,000 ರೂ. ಬಹುಮಾನ ನೀಡಿದ್ದಾರೆ.

 ಮಾ. 16ರಂದು ರಾತ್ರಿ ಸುಮಾರು 7:45ಕ್ಕೆ ಮಹಿಳೆಯೋರ್ವರು ಸಂಚಾರ ಉಪವಿಭಾಗದ ಎ.ಸಿ.ಪಿ. ಅವರಿಗೆ ಮೊಬೈಲ್ ನಂಬ್ರ 9480802312ಕ್ಕೆ ಕರೆ ಮಾಡಿ ತಾನು 15 ನಂಬ್ರದ ಬಸ್ಸೊಂದರಲ್ಲಿ ಪ್ರಯಾಣಿಕಳಾಗಿದ್ದು, ಮಂಗಳಾದೇವಿ ಬಸ್ ನಿಲ್ದಾಣಕ್ಕೆ ಟಿಕೆಟ್ ಖರೀದಿಸಿರುತ್ತೇನೆ. ಆದರೆ ಕಂಕನಾಡಿ ನಂತರ ಸದ್ರಿ ಬಸ್ಸಿನಲ್ಲಿ ಬೇರೆ ಪ್ರಯಾಣಿಕರು ಇಲ್ಲದೆ ಇದ್ದುದರಿಂದ ಬಸ್ಸಿನ ಕಂಡಕ್ಟರ್ ತನ್ನನ್ನು ಕಂಕನಾಡಿ ಬಸ್ ನಿಲ್ದಾಣದಲ್ಲಿ ಇಳಿಯುವಂತೆ ಒತ್ತಾಯಿಸಿರುವ ಬಗ್ಗೆ ದೂರಿಕೊಂಡಿದ್ದು, ಸೂಕ್ತ ಕ್ರಮಕ್ಕೆ ಕೋರಿದ್ದರು.

ಎ.ಸಿ.ಪಿ. ಅವರ ನಿರ್ದೇಶನದಂತೆ ಕರ್ತವ್ಯನಿರತ ಸಂಚಾರ ಪೂರ್ವ ಪೊಲೀಸ್ ಠಾಣಾ ಉಪನಿರೀಕ್ಷಕ ಆರ್.ಕೆ. ಗವಾರ್ ಅವರು ಮಹಿಳೆಯನ್ನು ಅದೇ ಬಸ್ಸಿನಲ್ಲಿ ಮಂಗಳಾದೇವಿ ಬಸ್ ನಿಲ್ದಾಣದವರೆಗೆ ಕರೆದುಕೊಂಡು ಹೋಗುವಂತೆ ಬಸ್ಸಿನವನಿಗೆ ಸೂಚಿಸಿದ್ದಾರೆ. ಅಲ್ಲದೆ ಮಹಿಳೆಯ ಸುರಕ್ಷತೆ ಮತ್ತು ಅವರು ಮಂಗಳಾದೇವಿಗೆ ತಲುಪಿದ ಬಗ್ಗೆ ಖಾತರಿಪಡಿಸಿಕೊಳ್ಳಲು ಅವರು ಬಸ್ಸಿನ ಹಿಂದೆಯೆ ತನ್ನ ಮೋಟಾರ್ ಸೈಕಲಿನಲ್ಲಿ ಹಿಂಬಾಲಿಸಿದ್ದಾರೆ.

ಪೊಲೀಸರ ಈ ಸಕಾಲಿಕ ಕ್ರಮದಿಂದ ಸಂತೋಷಗೊಂಡ ಆ ಮಹಿಳೆ ಮತ್ತೆ ಫೋನ್ ಕರೆ ಮಾಡಿ ಶ್ಲಾಘಿಸಿ ಧನ್ಯವಾದ ಸಲ್ಲಿಸಿದ್ದರು.

 ಈ ರೀತಿ ಸಕಾಲಿಕವಾಗಿ ಸ್ಪಂದಿಸಿ ಇಲಾಖೆ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆಯ ಪಾತ್ರರಾಗಿರುವ ಆರ್.ಕೆ.ಗವಾರ್‌ರನ್ನು ಪೊಲೀಸ್ ಆಯುಕ್ತರು ಶ್ಲಾಘನಾ ಪತ್ರ ಹಾಗೂ 5,000 ರೂ. ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News