ಸಿಆರ್‌ಝಡ್ ಮರಳುಗಾರಿಕೆ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸಚಿವ ಪ್ರಮೋದ್ ಸೂಚನೆ
ಉಡುಪಿ, ಮಾ.18: ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅನುಕೂಲವಾಗುವಂತೆ ಹಾಗೂ ಕಾಮಗಾರಿಗಳಿಗೆ ಮರಳು ಲಭ್ಯವಾಗಿಸಲು ಸಿಆರ್‌ಝಡ್ ವ್ಯಾಪ್ತಿ ಯಲ್ಲಿ ಮರಳುಗಾರಿಕೆ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ಹಾಗೂ ಮಾರ್ಗದರ್ಶನ ನೀಡಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮರಳುಗಾರಿಕೆ ಬಗ್ಗೆ ಸಮಿತಿಯಲ್ಲಿರುವ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಆಲಿಸಿದ ಸಚಿವರು, ತಾವು ಹಿಂದಿನಿಂದಲೂ ನೀಡುತ್ತಿದ್ದ ಸಲಹೆಯನ್ನು ಪಾಲಿಸಿದ್ದರೆ ಜಿಲ್ಲೆಯಲ್ಲಿ ಮರಳುಗಾರಿಕೆ ಸಮಸ್ಯೆ ಸೃಷ್ಟಿ ಯಾಗುತ್ತಿರಲಿಲ್ಲ ಎಂದರು. ಮೀನುಗಾರಿಕೆಗೆ ಮರಳು ದಿಬ್ಬಗಳಿಂದ ತೊಂದರೆ ಯಾಗುತ್ತಿದ್ದು ಮೀನುಗಾರಿಕೆ ಇಲಾಖಾಧಿಕಾರಿಗಳ ಅಭಿಪ್ರಾಯವನ್ನು ಪಡೆದು ಮರಳುಗಾರಿಕೆ ಪ್ರಕ್ರಿಯೆಗೆ ಚಾಲನೆ ನೀಡಿ ಎಂದವರು ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಭೂವಿಜ್ಞಾನ ಹಾಗೂ ಗಣಿ ಇಲಾಖೆ ಅಧಿಕಾರಿ ಕುಮಾರ್ ಅವರಿಂದ ನೂತನ ಸಮಿತಿ ರಚನೆ ಸಂಬಂಧ ಪ್ರಸ್ತಾಪವನ್ನು ಆದಷ್ಟು ಶೀಘ್ರ ನೀಡುವಂತೆ ಹಾಗೂ 2016-17ನೇ ಸಾಲಿನಲ್ಲಿ 170 ತಾತ್ಕಾಲಿಕ ಪರವಾನಿಗೆದಾರರು ಪಾವತಿಸಿರುವ ರಾಜಧನವನ್ನು ಹಿಂದಿರುಗಿಸುವ ಬಗ್ಗೆಯೂ ತಕ್ಷಣವೇ ಸ್ಪಷ್ಟೀಕರಣ ನೀಡಿ ಎಂದು ಸೂಚನೆ ನೀಡಿದರು.
ಸಹಾಯಕ ಆಯುಕ್ತರಿಗೆ ಸಾಂಪ್ರದಾಯಿಕ ಮೀನುಗಾರರನ್ನು ಗುರುತಿಸುವ ಹೊಣೆಯನ್ನು ನೀಡಿ ಎಂದ ಸಚಿವರು, ಸ್ಥಳೀಯರಿಗೆ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ಅನುಕೂಲವಾಗುವಂತೆ ಆಯ್ಕೆ ನಡೆಸುವಾಗ ಅವರ ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ವಾಸ್ತವ್ಯದ ವಿಳಾಸಗಳನ್ನು ತೆಗೆದುಕೊಳ್ಳುವಂತೆ, ಹಂತ ಹಂತವಾಗಿ ಮರಳುಗಾರಿಕೆ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ, ಸಹಾಯಕ ಆಯುಕ್ತೆ ಶಿಲ್ಪಾನಾಗ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಗಣಿ ಇಲಾಖೆ ಅಧಿಕಾರಿ ಕೋದಂಡರಾಮಯ್ಯ, ಆರ್‌ಟಿಒ ಗುರುಮೂರ್ತಿ ಕುಲಕರ್ಣಿ, ಪರಿಸರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.