ಮಕ್ಕಳಿಗೆ ಸಂಸ್ಕಾರ ನೀಡಿ ವೃದ್ಧಾಶ್ರಮದಿಂದ ದೂರ ಇರಿ: ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ
ಮಲ್ಪೆ, ಮಾ.18: ಹುಟ್ಟುವ ಮಕ್ಕಳಿಗೆ ಗರ್ಭದಲ್ಲಿರುವಾಗಲೇ ತಾಯಿ ಸಂಸ್ಕಾರವನ್ನು ಕೊಡುವಂತಾದರೆ ಮಾತ್ರ ಮುಂದೆ ಆ ತಂದೆ ತಾಯಿ ವೃದ್ದಾ ಶ್ರಮ ಸೇರುವುದನ್ನು ತಪ್ಪಿಸಲು ಸಾಧ್ಯವಿದೆ ಎಂದು ಉಡುಪಿ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕೊಡವೂರು ಮೂಡುಬೆಟ್ಟುವಿನಲ್ಲಿ ಶನಿವಾರ ಶ್ರೀಕೃಷ್ಣ ವೃದ್ಧಾಶ್ರಮದ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಕಳಿಸಿಕೊಡಲು ಮೂಲ ಕಾರಣ ಅವರ ತಂದೆ ತಾಯಿಗಳೇ. ಲೌಕಿಕ ಶಿಕ್ಷಣದಿಂದಾಗಿ ಇಂದು ಸಂಬಂಧಗಳು ಕಳಚಿ ಕೊಳ್ಳುತ್ತಿವೆ ಎಂದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ನಮ್ಮನ್ನು ಹೆತ್ತು ಸಲಹಿಸಿದ ತಂದೆ ತಾಯಿಯನ್ನು ಸಾಕುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಅದನ್ನು ಚಾಚೂ ತಪ್ಪದೆ ನಾವೆಲ್ಲರೂ ನಿರ್ವಹಿಸಬೇಕು ಎಂದು ತಿಳಿಸಿದರು.
ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಉದ್ಯಮಿ ರಾಘವೇಂದ್ರ ಆಚಾರ್ಯ, ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯ ಹಾರ್ಮಿಸ್ ನರೋನ್ಹಾ, ಹಿರಿಯ ನಾಗರಿಕ ಇಲಾಖಾಧಿಕಾರಿ ನಿರಂಜನ ಭಟ್, ಮಾರ್ಗದರ್ಶಕ ಡಾ.ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ, ಕಡೆಕಾರು ಶ್ರೀಶ ಭಟ್, ಶ್ರೀಧರ ಭಟ್, ದೇವಿ ಪ್ರಸಾದ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ವಿಷ್ಣುಮೂರ್ತಿ, ರಘುವೀರ್ ಬಲ್ಲಾಳ್, ಶ್ರೀಶ ಕೊಡವೂರು, ಗಣೇಶ್ ಮಧ್ಯಸ್ಥ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯಡ್ಕ ರಾಧಾಕೃಷ್ಣ ಭಟ್ ಸ್ವಾಗತಿಸಿದರು. ಸಂಸ್ಥೆಯ ಸ್ಥಾಪಕ ಕೊರಂಗ್ರ ಪಾಡಿ ಕೃಷ್ಣಮೂರ್ತಿ ಆಚಾರ್ಯ ವಂದಿಸಿದರು. ಸುಬ್ರಹ್ಮಣ್ಯ ಬಾಸ್ರಿ ಕಾರ್ಯ ಕ್ರಮ ನಿರೂಪಿಸಿದರು.