×
Ad

ಕೃಷಿಯಲ್ಲಿ ಹೊಸತನದ ಪ್ರಯೋಗಶೀಲತೆಗಳು ನಡೆಯಬೇಕು: ಸಂಸದ ನಳಿನ್

Update: 2017-03-18 23:02 IST

ಪುತ್ತೂರು, ಮಾ.18: ಪ್ರಸ್ತುತ ಕೃಷಿಕರು ಕಾರ್ಮಿಕರ, ನೀರಿನ ಹಾಗೂ ಮಾರುಕಟ್ಟೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವೆಲ್ಲಕ್ಕೂ ಪರಿಹಾರವಾಗಿ ಗೇರು ಕೃಷಿ ರೈತರನ್ನು ಕಾಪಾಡುವ ಕೆಲಸ ಮಾಡುತ್ತಿದೆ. ಗೇರು ಕೃಷಿಯಲ್ಲಿ ಹೊಸ ಪ್ರಯೋಗಶೀಲತೆಗಳು ನಡೆಯಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

 ಅವರು ಶನಿವಾರ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯ ಹಾಗೂ ನವದೆಹಲಿಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕಡಮಜಲು ಎಂಬಲ್ಲಿನ ಪ್ರಗತಿಪರ ಗೇರು ಕೃಷಿಕ ಕಡಮಜಲು ಸುಭಾಸ್ ರೈ ಅವರ ಗೇರು ತೋಟದಲ್ಲಿ ನಡೆದ ‘ಸಸ್ಯ ತಳಿ ಸಂರಕ್ಷಣೆ ಹಾಗೂ ಕೃಷಿಕರ ಹಕ್ಕುಗಳುತರಬೇತಿ ಮತ್ತು ಅರಿವು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಕಷ್ಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ನಮ್ಮ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ತೀರಾ ಕಡಿಮೆ. ಇದಕ್ಕೆ ಇಲ್ಲಿನ ಕೃಷಿಕರ ಪ್ರಯೋಗ ಶೀಲತೆಗಳೇ ಕಾರಣ ಎಂದ ಅವರು ಕೃಷಿ ಮತ್ತು ಋಷಿ ಸಂಸ್ಕೃತಿ ನಮ್ಮದ್ದಾಗಿದ್ದು, ದೇಶದ ಕೃಷಿ ಸಂಸ್ಕೃತಿಗೆ ಸೊಗಡಿದೆ. ಪೂಜನೀಯ ಭಾವನೆಯಿದೆ ಎಂದರು. ದೇಶದಲ್ಲಿ 80 ಲಕ್ಷ ಟನ್ ಗೇರು ಬೇಡಿಕೆಯಿದ್ದು, ಕೇವಲ 1 ಲಕ್ಷ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. ಉಳಿದ 79 ಲಕ್ಷ ಟನ್ ಗೇರನ್ನು ಆಮದು ಮಾಡಿಕೊಳ್ಳಲಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರು ಗೇರು ಕೃಷಿಯತ್ತ ಮನ ಮಾಡಬೇಕೆಂದು ಅವರು ತಿಳಿಸಿದರು.

  ನವಹೆದಲಿ ಸಸ್ಯ ತಳಿ ಸಮರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಚೇರ್‌ಮೆನ್ ಡಾ.ಆರ್.ಆರ್.ಹಂಚಿನಾಲ್ ಅವರು ಮಾತನಾಡಿ ಕೃಷಿ ಸಂಪತ್ತು ಇಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ ಇಂದಿನ ದಿನಗಳಲ್ಲಿ ಸಸ್ಯ ರಾಶಿಯನ್ನು ನಾಶಮಾಡಿ ಕಾಂಕ್ರೀಟ್ ಪಾರಸ್ಟ್ ಮಾಡಲಾಗುತ್ತಿದ್ದು, ಇದು ದೇಶಕ್ಕೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ವಿನಾಶಕಾಲವನ್ನು ತಂದೊಡ್ಡಲಿದೆ ಎಂದು ಎಚ್ಚರಿಸಿದರು.

ಪ್ರತಿಯೊಬ್ಬ ರೈತ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ತಳಿಗಳನ್ನು ಹಾಗೂ ಸ್ವತಹಃ ಆವಿಷ್ಕರಿಸಿದ ತಳಿಗಳನ್ನು ಸಂರಕ್ಷಿಸಿಕೊಂಡು ಬರಬೇಕು. ಸಸ್ಯ ತಳಿಗಳ ನೋಂದಣಿ ಮಾಡಿಕೊಂಡು ಅದರ ಹಕ್ಕುಗಳನ್ನು ಕಾಯ್ದಿರಿಸಿಕೊಂಡು ಬರಬೇಕು ಎಂದು ತಿಳಿಸಿದ ಅವರು ರೈತ ತಳಿಗಳ ಸಂರಕ್ಷಣೆಯ ಉದ್ದೇಶದಿಂದಲೇ 2005ರಲ್ಲಿ ಕಾಯಿದೆ ಜಾರಿಗೊಂಡಿದೆ ಎಂದರು. ನಾವು ಆಧುನಿಕವಾಗಿ ಮುಂದುವರಿದುಕೊಂಡು ಬಂದಿದ್ದರೂ ಇಂದಿಗೂ ಕೆಲವೊಂದು ರೋಗಗಳ ಸಂದರ್ಭದಲ್ಲಿ ಆಯುರ್ವೇದ ಔಷಧಿಯ ಕಡೆಗೆ ಹೋಗುತ್ತಿದ್ದೇವೆ ಎಂಬುವುದು ಸಸ್ಯ ರಾಶಿಯ ಮಹತ್ವವನ್ನು ಸಾರುತ್ತಿದ್ದು, ಸಸ್ಯ ರಾಶಿಯನ್ನು ಉಳಿಸಿ ಬೆಳೆಸುವುದು ಬಹಳ ಮುಖ್ಯವೂ ಇಂದಿನ ಅನಿವಾರ್ಯತೆಯೂ ಆಗಿದೆ ಎಂದು ತಿಳಿಸಿದರು.

ಅಂತರ್‌ರಾಷ್ಟ್ರೀಯ ಜೀವ ವೈವಿಧ್ಯ ಸಂಸ್ಥೆಯ ವಿಭಾಗೀಯ ಮುಖ್ಯಸ್ಥ ಡಾ.ಎನ್.ಕೆ.ಕೃಷ್ಣಕುಮಾರ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಗೇರು ಬೆಲೆ ಬಹಳಷ್ಟು ಏರಲಿದೆ. ಕೋಕೋ ಬೆಳೆಗೂ ಊಹಿಸಲಾಗದಷ್ಟು ಬೇಡಿಕೆ ಬರಲಿದೆ ಎಂದರು. ಜೀವ ವೈವಿಧ್ಯವನ್ನು ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಅವರು ತಿಳಿಸಿದರು.

ಶಾಸಕಿ ಶಕುಂತಳಾ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಪ್ರಾದೇಶಿಕ ಮುಖ್ಯಸ್ಥ ಡಾ.ಆರ್.ಸಿ.ಅಗರ್‌ವಾಲ್ ಅವರು ಮಾಹಿತಿ ನೀಡಿದರು.

ಪ್ರಗತಿಪರ ಕೃಷಿಕ ಕಡಮಜಲು ಸುಭಾಸ್ ರೈ ಅವರು ತಮ್ಮ ಕೃಷಿ ಅನುಭವವನ್ನು ತಿಳಿಸಿದರು. ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ.ಎಂ.ಜಿ.ನಾಯಕ್ ಅವರು ಸ್ವಾಗತಿಸಿದರು. ನಿರ್ದೇಶನಾಲಯದ ಹಿರಿಯ ವಿಜ್ಞಾನಿ ಡಾ.ಮೋಹನ್ ಜಿ.ಎಸ್.ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News