×
Ad

ಅಡುಗೆ ಅನಿಲ ದರ ಏರಿಕೆ: ದ.ಕ. ಜಿಲ್ಲಾ ಕಾಂಗ್ರೆಸ್ ಖಂಡನೆ

Update: 2017-03-19 00:26 IST

ಮಂಗಳೂರು, ಮಾ.18: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲಗಳ ಬೆಲೆ ಇಳಿಕೆಯಾದರೂ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯನ್ನು ಏರಿಕೆ ಮಾಡಲಾಗುತ್ತಿದೆ. ಯುಪಿಎ ಸರಕಾರದ ಅವಧಿಯಲ್ಲಿ 320 ರೂ.ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ 780 ರೂ.ಗೆ ಏರಿಕೆ ಮಾಡಲಾಗಿದೆ. ಇದು ಖಂಡನೀಯ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ತಿಳಿಸಿದ್ದಾರೆ.

 ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡವರ ಉದ್ಧಾರ ಮಾಡುತ್ತೇವೆ ಎಂದು ಹೇಳುವ ಮೋದಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಇಳಿಕೆ ಮಾಡಲು ಸಾಧ್ಯವಾಗಿಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದರು.

ಇತ್ತೀಚೆಗೆ ಐದು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರಪಯೋಗ ಮಾಡಿದೆ. ಐದು ರಾಜ್ಯಗಳ ಪೈಕಿ ಮೂರು ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆದರೆ ಬಿಜೆಪಿ ಹಣ ಮತ್ತು ತೋಳ್ಬಲ ಬಳಸಿ ಅಧಿಕಾರಕ್ಕೆ ಬಂದಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ನಿಯೋಗವೊಂದು ತೆರಳಿ ಜಿಲ್ಲೆಯ ಅಗತ್ಯತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿತ್ತು. ಬಜೆಟ್‌ನಲ್ಲಿ ಅವುಗಳಿಗೆ ಅನುದಾನ ಮೀಸಲಿಡುವ ಮೂಲಕ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ ಎಂದರು.

 ಸುದ್ದಿಗೋಷ್ಠಿಯಲ್ಲಿ ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್ ಕಾಪಿಕಾಡ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕಾರ್ಪೊರೇಟರ್‌ಗಳಾದ ಕವಿತಾ ವಾಸು, ರತಿಕಲಾ, ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ, ನಝೀರ್ ಬಜಾಲ್, ಹರ್ಷರಾಜ್ ಮುದ್ಯ, ಸಂತೋಷ್‌ಕುಮಾರ್ ಶೆಟ್ಟಿ ಅಸೈಗೋಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News