ನಾರಾಯಣ ಗುರುಗಳ ಮೇಲೆ ಕೇಸು ದಾಖಲಿಸಿದವರು ಯಾರು?

Update: 2017-03-19 04:39 GMT

ಮಂಗಳೂರು, ಮಾ.19: ಹಿಂದೂ ಧರ್ಮ ಹಾಳು ಮಾಡಿದರು ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಮೇಲೆ ಕೇಸು ಹಾಕಿದವರು ಯಾರು? ಎಂಬ ವಿಷಯವಾಗಿ ತುಳು ಸಂವಾದವೊಂದು ಶನಿವಾರ ಸಂಜೆ ಮಂಗಳೂರಿನ ಡಾನ್ ಬಾಸ್ಕೋ ಮಿನಿ ಹಾಲ್‌ನಲ್ಲಿ ನಡೆಯಿತು.

 ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರ ಆಯೋಜಿಸಿದ್ದ ಈ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರದ ಸಂಚಾಲಕ ಪೇರೂರು ಜಾರು ಮಾತನಾಡಿ, 1887ರಲ್ಲಿ ನಾರಾಯಣ ಗುರುಗಳು ಶಿವಾಲಯ ನಿರ್ಮಿಸಿದ ಬಳಿಕ ವೈದಿಕರು ಅವರನ್ನು ವಿರೋಧಿಸತೊಡಗಿದರು. ತಿರುವನಂತಪುರದ ಮೇಲ್ಜಾತಿ ಜನ ಹಿಂದೂ ಧರ್ಮ ಹಾಳು ಮಾಡುತ್ತಿದ್ದಾರೆ ಎಂದು ನಾರಾಯಣ ಗುರುಗಳ ಮೇಲೆ ಕೇಸು ಹಾಕಿ ಅವರು 18 ವರ್ಷ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದರು. ಮುಂದೆ ಸರ್ವ ಧರ್ಮೀಯರ ಒತ್ತಡದ ಪತ್ರದ ಆಧಾರದ ಮೇಲೆ ಅಂದಿನ ಚೆನ್ನೈ ಹೈಕೋರ್ಟ್ ಕೇಸನ್ನು ಬ್ರಿಟಿಷ್ ನ್ಯಾಯಾಧೀಶ ವಜಾ ಮಾಡಿದರು ಎಂದು ವಿವರಿಸಿದರು.

ಈ ಪ್ರಕರಣದ ಬಳಿಕ ಮೇಲ್ವರ್ಗದವರು ದಮನಿತ ವರ್ಗಕ್ಕೆ ಕೂಲಿ ಕೆಲಸ ಕೊಡದಿರಲು ತೀರ್ಮಾನಿಸಿದರು. ಆಗ ನಾರಾಯಣ ಗುರುಗಳು ಅವರಿಗಾಗಿ ಗಂಜಿ ಕೇಂದ್ರ ತೆರೆದು ಸಹಕರಿಸಿದರು. ಅಲ್ಲದೆ ಸ್ವ ಉದ್ಯೋಗವಾಗಿ ಹುರಿಹಗ್ಗದಿಂದ ಸಾಬೂನಿನವರೆಗೆ ಎಲ್ಲವನ್ನೂ ತಯಾರಿಸಿ ಅವರೇ ಮಾರುವ ವ್ಯವಸ್ಥೆಯನ್ನೂ ಮಾಡಿದರು ಎಂದು ತಿಳಿಸಿದರು.

 ನಾರಾಯಣ ಗುರುಗಳು ಒಮ್ಮೆ ಗುರುಗಳೆನಿಸಿಕೊಂಡ ಮೇಲೆ ತನ್ನ ಹಣೆಯ ಮೇಲೆ ಧಾರ್ಮಿಕ ಚಿಹ್ನೆ ಧರಿಸುವುದನ್ನು ತೊರೆದರು. ಆಲುವದಲ್ಲಿ ಸರ್ವ ಧರ್ಮ ಅಧ್ಯಯನ ಕೇಂದ್ರ ತೆರೆದುದಲ್ಲದೆ ಅಲ್ಲಿ ಯಾವುದೇ ಪೂಜೆ, ಮೂರ್ತಿ ಸಲ್ಲದೆಂದರು. ಹಣ ಹಾಳು ಮಾಡುವ ಯಾವುದೇ ಪೂಜೆಯ ಅಗತ್ಯವಿಲ್ಲವೆಂದಿದ್ದರು ಗುರು. ನಾರಾಯಣ ಗುರುಗಳು ಸಾವಿನ ಕೊನೆ ಹೊತ್ತಿನಲ್ಲೂ ಹಿಂದೂ ವ್ಯವಸ್ಥೆಯನ್ನು ವಿರೋಧಿಸಿದವರು ಎಂಬುದು ನೆನಪಿಡಬೇಕಾದ ವಿಷಯ ಎಂದು ಪೇರೂರು ಜಾರು ಹೇಳಿದರು.

ಹಿರಿಯ ಪತ್ರಕರ್ತ ವಿ.ಟಿ.ರಾಜಶೇಕರ್ ಮಾತನಾಡಿ, ತಿರುವನಂತಪುರ ಮತ್ತು ಮಂಗಳೂರಿನಲ್ಲಿ ನಾರಾಯಣ ಗುರುಗಳ ಕೆಲಸದ ಮತ್ತು ಬೆಂಬಲಿಗರ ಸಾಮ್ಯತೆಯನ್ನು ವಿವರಿಸಿದರು.

ಪ್ರವೀಣ್ ಶೆಟ್ಟಿ, ದಿನೇಶ್ ಮುಲ್ಕಿ, ಮಹೇಶ್, ನವೀನ್‌ಚಂದ್ರ ಮೊದಲಾದಾವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News