×
Ad

ಉ.ಪ್ರ. ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಆಯ್ಕೆ: ಪ್ರತಿಪಕ್ಷಗಳಿಂದ ತೀಕ್ಷ್ಣ ಪ್ರತಿಕ್ರಿಯೆ

Update: 2017-03-19 12:20 IST

ಹೊಸದಿಲ್ಲಿ, ಮಾ.19: ಉತ್ತರಪ್ರದೇಶ ನೂತನ ಮುಖ್ಯಮಂತ್ರಿಯಾಗಿ ವಿವಾದಿತ ಸಂಸದ ಯೋಗಿ ಆದಿತ್ಯನಾಥ್ ಆಯ್ಕೆಯಾಗಿರುವುದಕ್ಕೆ ಪ್ರತಿಪಕ್ಷಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿವೆ.

ಬಿಜೆಪಿಯ ಬದ್ಧ ಎದುರಾಳಿ ಕಾಂಗ್ರೆಸ್ ಗೋರಖ್‌ಪುರ ಸಂಸದ ಯೋಗಿ ಆದಿತ್ಯನಾಥ್ ಉತ್ತರಪ್ರದೇಶ ಸಿಎಂ ಆಗಿ ಆಯ್ಕೆಯಾಗಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದೆ.

"ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಆಡಳಿತ ಪಕ್ಷದ ಪರಮಾಧಿಕಾರ. ಶಾಸಕಾಂಗ ಪಕ್ಷದ ಸಭೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿಗಳ ನೇಮಕದಲ್ಲಿ ವಿಳಂಬವಾಗಿರುವುದು ಹಾಗೂ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿರುವುದು ಬಿಜೆಪಿಯೊಳಗೆ ಅಧಿಕಾರಕ್ಕಾಗಿ ಕಚ್ಚಾಟ ಆರಂಭವಾಗಿರುವುದನ್ನು ಪ್ರತಿಬಿಂಬಿಸುತ್ತಿದೆ’’ ಎಂದು ಕಾಂಗ್ರೆಸ್ ಮುಖ್ಯ ವಕ್ತಾರರಾದ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.

  ಹೊಸ ಸರಕಾರಕ್ಕೆ ಶುಭಾಶಯ ಕೋರಿದ ಸಿಂಗ್, ಹೊಸ ಸರಕಾರ ಆಂತರಿಕ ಕಚ್ಚಾಟವನ್ನು ಮೀರಿ ಚುನಾವಣೆಯ ವೇಳೆ ಭರವಸೆ ನೀಡಿರುವ ರೈತರ ಸಾಲ ಮನ್ನಾ, ವಿದ್ಯುಚ್ಛಕ್ತಿ ದರ ಕಡಿತ, ರೈತರಿಗೆ 50 ಶೇ.ಕ್ಕೂ ಅಧಿಕ ಬೆಂಬಲ ಬೆಲೆ ನೀಡಿಕೆ, ಯುವಕರಿಗೆ ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಪುನಶ್ಚೇತನ ಹಾಗೂ ಪಕ್ಷ ಘೋಷಿಸುತ್ತಾ ಬಂದಿರುವ ‘ಸಬ್‌ಕಾ ಸಾಥ್, ಸಬ್ ಕಾ ವಿಕಾಸ್’ನ್ನು ಬೇಗನೆ ಈಡೇರಿಸಬೇಕು ಎಂದು ಹೇಳಿದರು.

"ಉರಿ ನಾಲಗೆಯ ಸಂಸದನನ್ನು ದೇಶದ ಅತಿ ದೊಡ್ಡ ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಿಸುವ ಮೂಲಕ ಬಿಜೆಪಿ ವ್ಯವಸ್ಥಿತವಾಗಿ ಜಾತಿ ಪರ ಕಾರ್ಡ್‌ನ ಮೂಲಕ ರಾಜಕೀಯ ಆಟವಾಡಲು ಆರಂಭಿಸಿದೆ. ಆದಿತ್ಯನಾಥ್ ಆಯ್ಕೆಯು ರಾಜ್ಯದಲ್ಲಿರುವ ಪ್ರಧಾನಿ ಮೋದಿ-ಅಮಿತ್ ಶಾ ಅವರ ರಾಜಕೀಯ ಬ್ರಾಂಡ್‌ನ ಪರಾಕಾಷ್ಠೆಯಾಗಿದೆ’’ ಎಂದು ಸಿಪಿಎಂ ಪಾಲಿಟ್‌ಬ್ಯುರೋ ಸದಸ್ಯ ಮುಹಮ್ಮದ್ ಸಲೀಮ್ ಅಭಿಪ್ರಾಯಪಟ್ಟಿದ್ದಾರೆ.

ಸಂಸತ್‌ನಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಿರುವ ಬಿಜು ಜನತಾದಳ ಕೂಡ ಆದಿತ್ಯನಾಥ್ ಆಯ್ಕೆಯನ್ನು ಪ್ರಶ್ನಿಸಿದ್ದು, ‘‘ಅವರಿಗೆ(ಆದಿತ್ಯನಾಥ್) ಯಾವುದೇ ಆಡಳಿತಾತ್ಮಕ ಅನುಭವವಿಲ್ಲ. ಈತನಕ ಯಾವುದೆ ಜವಾಬ್ದಾರಿ ಹುದ್ದೆಯನ್ನು ನಿರ್ವಹಿಸಿಲ್ಲ. ಅವರು ಉತ್ತರಪ್ರದೇಶ ಜನರ ನಿರೀಕ್ಷೆಗೂ ಮೀರಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ’’ ಎಂದು ಬಿಜೆಡಿ ಮುಖಂಡ ಮೆಹ್ತಾಬ್ ಹೇಳಿದ್ದಾರೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News