ಮುಂಬೈನಲ್ಲಿ ಪೊಲೀಸ್ ಠಾಣೆ ಧ್ವಂಸ
ಮುಂಬೈ,ಮಾ.19: ವ್ಯಕ್ತಿಯೋರ್ವ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಕ್ಕಾಗಿ ಕೆರಳಿದ್ದ ಜನರ ಗುಂಪೊಂದು ಇಂದು ನಸುಕಿನಲ್ಲಿ ಆತನನ್ನು ಬಂಧನದಲ್ಲಿರಿಸಿದ್ದ ಇಲ್ಲಿಯ ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ದಾಂಧಲೆ ನಡೆಸಿ ಧ್ವಂಸಗೊಳಿಸಿದೆ.
ಆರೋಪಿಯನ್ನು ತಮ್ಮ ವಶಕ್ಕೊಪ್ಪಿಸುವಂತೆ ಆಗ್ರಹಿಸಿದ ಗುಂಪು ಠಾಣೆಯ ಹೊರಗೆ ನಿಲ್ಲಿಸಿದ್ದ ಕೆಲವು ಪೊಲೀಸ್ ವಾಹನಗಳಿಗೂ ಬೆಂಕಿ ಹಚ್ಚಿತು.
ಘಟನೆಯಿಂದಾಗಿ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದ್ದು, 17 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲವರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಆಕ್ಷೇಪಾರ್ಹ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಆರೋಪಿಯ ವಿರುದ್ಧ ಶನಿವಾರ ದೂರು ದಾಖಲಾಗಿದ್ದು,ಆತನನ್ನು ಟ್ರಾಂಬೆ ಪೊಲೀಸರು ಬಂಧಿಸಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಡಿಸಿಪಿ ಶಹಾಜಿ ಉಮಪ್ ತಿಳಿಸಿದರು.