×
Ad

ಮುಸ್ಲಿಂ ಧರ್ಮಗುರುಗಳು ನಾಳೆ ಭಾರತಕ್ಕೆ ವಾಪಸ್:ಸುಷ್ಮಾ

Update: 2017-03-19 14:32 IST

ಹೊಸದಿಲ್ಲಿ,ಮಾ.19: ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದು, ಬಳಿಕ ಪತ್ತೆಯಾಗಿರುವ ದಿಲ್ಲಿಯ ಹಝರತ್ ನಿಝಾಮುದ್ದೀನ್ ದರ್ಗಾದ ಇಬ್ಬರು ಧರ್ಮಗುರುಗಳ ಪೈಕಿ ಸೈಯದ್ ನಝೀಂ ಅಲಿ ನಿಝಾಮಿ ಅವರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಇಂದು ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಕರಾಚಿಯಲ್ಲಿರುವ ನಿಝಾಮಿಯವರ ಜೊತೆ ತಾನು ಮಾತನಾಡಿದ್ದೇನೆ. ತಾವು ಸುರಕ್ಷಿತರಾಗಿದ್ದು, ಸೋಮವಾರ ದಿಲ್ಲಿಗೆ ಮರಳುವುದಾಗಿ ಅವರು ತಿಳಿಸಿದ್ದಾರೆ ಎಂದು ಸುಷ್ಮಾ ರವಿವಾರ ಬೆಳಿಗ್ಗೆ ಟ್ವೀಟಿಸಿದ್ದಾರೆ.

ಇಬ್ಬರೂ ಧರ್ಮಗುರುಗಳು ಪತ್ತೆಯಾಗಿದ್ದು,ಕರಾಚಿ ತಲುಪಿದ್ದಾರೆ ಎಂದು ಪಾಕಿಸ್ತಾನವು ಶನಿವಾರ ಭಾರತಕ್ಕೆ ತಿಳಿಸಿತ್ತು.

ಹಝರತ್ ನಿಝಾಮುದ್ದೀನ ಔಲಿಯಾ ದರ್ಗಾದ ಮುಖ್ಯ ಧರ್ಮಗುರು ಸೈಯದ್ ಆಸಿಫ್ ನಿಝಾಮಿ ಮತ್ತು ಅವರ ಸೋದರ ಸಂಬಂಧಿ ನಝೀಂ ನಿಝಾಮಿ ಅವರು ಕರಾಚಿಯಲ್ಲಿರುವ ಆಸಿಫ್‌ರ ಸೋದರಿಯನ್ನು ಭೇಟಿ ಮಾಡಲೆಂದು ಮಾ.8ರಂಂದು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದರು.

ಮಾ.14ರಿಂದ ಅವರಿಬ್ಬರೂ ಕುಟುಂಬಿಕರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಅವರು ನಾಪತ್ತೆಯಾಗಿದ್ದಾರೆ ಎಂಬ ಕಳವಳ ವ್ಯಕ್ತವಾಗಿದ್ದು, ಈ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ದೂರನ್ನೂ ಸಲ್ಲಿಸಲಾಗಿತ್ತು.

ಮಾ.13ರಂದು ಲಾಹೋರ ಬಳಿಯ ದರ್ಗಾಕ್ಕೆ ಭೇಟಿ ನೀಡಿದ್ದ ಅವರು ಮಾ.14ರಂದು ಲಾಹೋರ ವಿಮಾನ ನಿಲ್ದಾಣದಲ್ಲಿ ಕರಾಚಿಗೆ ತೆರಳಲೆಂದು ವಿಮಾನವನ್ನು ಹತ್ತಿದ್ದಾಗ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಎಂಕ್ಯೂಎಂ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ ಎಂದು ಪಾಕ್ ಮೂಲಗಳು ಈ ಹಿಂದೆ ತಿಳಿಸಿದ್ದವು.

ಈ ಬಗ್ಗೆ ಸುಷ್ಮಾ ಪಾಕ್ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಝ್ ಅಝೀಝ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರು. ಇದಾದ ಬಳಿಕ ಧರ್ಮಗುರುಗಳು ಸಿಂಧ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದಾರೆ ಮತ್ತು ಅವರಿದ್ದ ಸ್ಥಳದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ್ದರಿಂದ ತಮ್ಮ ಬಂಧುಗಳನ್ನು ಸಂಪರ್ಕಿಸಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ಪಾಕಿಸ್ತಾನವು ಭಾರತಕ್ಕೆ ಸಂದೇಶ ರವಾನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News