×
Ad

ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯಾಗಿಸಿದ ಬಳಿಕ ಆಯ್ಕೆಯಲ್ಲಿ ತನ್ನ ಪಾತ್ರವಿಲ್ಲ ಎಂದ ಆರೆಸ್ಸೆಸ್

Update: 2017-03-19 15:11 IST

ಕೊಯಮತ್ತೂರು,ಮಾ.19: ಯೋಗಿ ಆದಿತ್ಯನಾಥ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕಗೊಳಿಸಲು ಆರೆಸ್ಸೆಸ್ ಒತ್ತಡವೇ ಕಾರಣ ಎಂಬ ವದಂತಿಗಳ ನಡುವೆಯೇ ರವಿವಾರ ಇದನ್ನು ನಿರಾಕರಿಸಿದ ಸಂಘವು, ಅದೊಂದು ರಾಜಕೀಯ ನಿರ್ಧಾರವಾಗಿದೆ ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಆಯ್ಕೆ ವಿಷಯದಲ್ಲಿ ತಾನು ಮೂಗು ತೂರಿಸುವುದಿಲ್ಲ ಎಂದು ಸಮಜಾಯಿಷಿ ನೀಡಿದೆ.

 ಇಂದಿಲ್ಲಿ ಸಂಘದ ಸ್ವಯಂಸೇವಕ ಆದಿತ್ಯನಾಥರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದ್ದರ ಕುರಿತು ಸುದ್ದಿಗಾರರ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ಭಾಗಯ್ಯ ಅವರು, ಅದೊಂದು ರಾಜಕೀಯ ನಿರ್ಧಾರವಾಗಿದೆ ಎಂದು ಹೇಳಿದರು.

ಆರೆಸ್ಸೆಸ್ ಪ್ರಚಾರಕ್ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಬಿಜೆಪಿಯು ಉತ್ತರಾಖಂಡದ ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವುದನ್ನು ಸುದ್ದಿಗಾರರು ಬೆಟ್ಟು ಮಾಡಿದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಆರೆಸ್ಸೆಸ್‌ನವರಾಗಿದ್ದಾರೆ ಎಂದು ಭಾಗಯ್ಯ ಸಮರ್ಥಿಸಿಕೊಂಡರು. ಮುಖ್ಯಮಂತ್ರಿಗಳ ನೇಮಕದಲ್ಲಿ ಆರೆಸ್ಸೆಸ್ ಯಾವುದೇ ಒತ್ತಡ ಹೇರುವುದಿಲ್ಲ ಎಂದರು.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅರ್ಚಕ ಪರಿವರ್ತಿತ ರಾಜಕಾರಣಿ ಹಾಗೂ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥ ಅವರ ಹೆಸರನ್ನು ಬಿಜೆಪಿ ಶನಿವಾರ ಪ್ರಕಟಿಸಿದ್ದು ಹಲವರ ಅಚ್ಚರಿಗೆ ಕಾರಣವಾಗಿತ್ತು. ಆದಿತ್ಯನಾಥ ರವಿವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News