ಮಾ.30ರಂದು ಲಾರಿ, ಬಸ್, ಟ್ಯಾಕ್ಸಿ ಮುಷ್ಕರ

Update: 2017-03-19 10:06 GMT

ಉಡುಪಿ, ಮಾ.18: ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೀತಿಯನ್ನು ವಿರೋಧಿಸಿ ಸೌತ್‌ರೆನ್ ಮೋಟಾರ್ ಟ್ರಾನ್ಸ್‌ಪೋರ್ಟ್ ವೆಲ್ಫೇರ್ ಅಸೋಸಿಯೇಶನ್ ಮಾ.30ರಂದು ದಕ್ಷಿಣ ವಲಯ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪಾಂಡಿಚೇರಿ ರಾಜ್ಯ ಗಳಲ್ಲಿ ಅನಿಧಿರ್ಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ ಎಂದು ಅಸೋಸಿ ಯೇಶನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.

ಉಡುಪಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟಕ್ಕೆ ಕರ್ನಾಟಕ ರಾಜ್ಯ ಲಾರಿ ಮಾಲಕರ ಮತ್ತು ಏಜೆಂಟ್‌ಗಳ ಅಸೋಸಿಯೇಶನ್, ಕರ್ನಾಟಕ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಒಕ್ಕೂಟ, ಕರ್ನಾಟಕ ರಾಜ್ಯ ಬಸ್ ಮಾಲಕರ ಒಕ್ಕೂಟಗಳು ಬೆಂಬಲ ಸೂಚಿಸಿದ್ದು, ಅಂದು ಲಾರಿ, ಟೆಂಪೊ, ಬಸ್, ಟ್ಯಾಕ್ಸಿಗಳು ರಸ್ತೆಗೆ ಇಳಿಯದೆ ಬಂದ್ ಆಚರಿಸಲಿವೆ ಎಂದರು.

 ಎ.1ರಿಂದ ಜಾರಿಗೆ ಬರಲಿರುವ ಇನ್ಸ್ಸೂರೆನ್ಸ್ ಕಂಪೆನಿಗಳ ಥರ್ಡ್ ಪಾರ್ಟಿ ಪ್ರೀಮಿಯಂ ದರ ಏರಿಕೆ ಕೈಬಿಡಬೇಕು. ಈಗಾಗಲೇ ನಿರ್ಮಾಣ ವೆಚ್ಚ ಹಾಗೂ ಲಾಭ ಗಳಿಸಿರುವ ಟೋಲ್‌ಗಳನ್ನು ರದ್ದುಗೊಳಿಸಬೇಕು. ಉಡುಪಿ ಜಿಲ್ಲೆಯ ಎರಡು ಟೋಲ್ ಗೇಟ್‌ಗಳಲ್ಲಿ ಉಡುಪಿ ನೋಂದಾಣಿಯ ವಾಣಿಜ್ಯ ವಾಹನಕ್ಕೆ ಟೋಲ್ ಫ್ರೀ ಮಾಡಬೇಕು. 15 ವರ್ಷದ ಹಳೆ ವಾಣಿಜ್ಯ ವಾಹನಗಳನ್ನು ಸ್ಕ್ರಾಪ್ ಮಾಡುವ ನಿರ್ಧಾರವನ್ನು ಕೈಬಿಡಬೇಕು. ವೇಗ ನಿಯಂತ್ರಣ ಅಳವಡಿಸಲು ಕೆಲವು ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದವರು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ಕೇಂದ್ರ ಮೋಟಾರ್ ಕಾಯ್ದೆ 1989ರ ನಿಯಮಕ್ಕೆ ತಿದ್ದುಪಡಿ ತಂದು ಸಾರಿಗೆ ಇಲಾಖೆಯ ಶುಲ್ಕವನ್ನು ಏರಿಸಿರುವುದನ್ನು ಕೈಬಿಡಬೇಕು. ದಕ್ಷಿಣ ಭಾರತದ ಎಲ್ಲ ಪ್ರವಾಸಿ ವಾಹನಗಳಿಗೆ ಏಕ ರೂಪ ನೋಂದಣಿ ಮತ್ತು ತೆರಿಗೆ ವಿಧಿಸಬೇಕು. ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಕಳ್ಳ ಟ್ಯಾಕ್ಸಿ ಹಾವಳಿಗೆ ಕಡಿವಾಣ ಹಾಕಬೇಕು. ಖಾಸಗಿ ಸಾರಿಗೆ ಮಾರ್ಗದಲ್ಲಿ ಸರಕಾರಿ ಬಸ್‌ಗಳನ್ನು ಓಡಿಸುವ ಸರಕಾರದ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು. ಪ್ರವಾಸಿ ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳಿಗೆ ಪರವಾನಿಗೆ ನೀಡಬೇಕು. ಮರಳು ಪರವಾನಿಗೆ ನೀತಿಯನ್ನು ಜಾರಿಗೆ ತರಬೇಕು ಎಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ರಾಜ್ಯ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮಾತನಾಡಿ, ಉಡುಪಿ, ಮಂಗಳೂರಿನ ಮೂರು ಟೋಲ್‌ಗೇಟ್‌ಗಳಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದರಿಂದ ಬಸ್ ಮಾಲಕರಿಗೆ ದೊಡ್ಡ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಬೆಂಬಲಿಸಿ ಅವಿಭಜಿತ ದ.ಕ. ಜಿಲ್ಲೆಯ ಖಾಸಗಿ ಹಾಗೂ ಸಿಟಿ ಬಸ್ ಬಂದ್ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಒಕ್ಕೂಟದ ಅಧ್ಯಕ್ಷ ಕೆ.ಜಿ.ರವೀಂದ್ರ, ಲಾರಿ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಟ್ಯಾಕ್ಸಿಮೆನ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ. ಕೋಟ್ಯಾನ್, ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News