×
Ad

ಕಾರ್ತಿಕ್‌ ಹತ್ಯೆ ಆರೋಪಿಗಳನ್ನು ಒಂದು ತಿಂಗಳೊಳಗೆ ಬಂಧಿಸದಿದ್ದರೆ ಠಾಣೆಗೆ ಮುತ್ತಿಗೆ: ಸಂತೋಷ್ ಕುಮಾರ್ ಎಚ್ಚರಿಕೆ

Update: 2017-03-19 17:10 IST

ಕೊಣಾಜೆ, ಮಾ.19: ಕಾರ್ತಿಕ್ ರಾಜ್ ಹತ್ಯೆ ನಡೆದು ಇಷ್ಟು ತಿಂಗಳಾದರೂ ಆರೋಪಿಗಳ ಸುಳಿವಿಲ್ಲ. ಕುಟುಂಬಕ್ಕೆ ನ್ಯಾಯವೂ ಸಿಕ್ಕಿಲ್ಲ. ಈ ನೋವು ಕೇವಲ ಕಾರ್ತಿಕ್‌ರಾಜ್ ಕುಟುಂಬದ ನೋವು ಮಾತ್ರವಲ್ಲ ಇದು ಈ ಭಾಗದ ಇಡೀ ಜನತೆಯ ನೋವಾಗಿದೆ. ಆದ್ದರಿಂದ ಇನ್ನು ಒಂದು ತಿಂಗಳೊಳಗೆ ಆರೋಪಿಗಳನ್ನು ಪತ್ತೆ ಹಚ್ಚದಿದ್ದರೆ ನಾವೆಲ್ಲರೂ ಒಟ್ಟು ಸೇರಿ ಕೊಣಾಜೆ ಠಾಣೆಯೊಳಗೆ ಮುತ್ತಿಗೆ ಹಾಕುತ್ತವೆ. ಸಾಧ್ಯವಿದ್ದರೆ ಬಂಧಿಸಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಎಚ್ಚರಿಕೆ ನೀಡಿದರು.

 ಅವರು ಹಿಂದೂ ಹಿತರಕ್ಷಣಾ ವೇದಿಕೆ ಪಜೀರು ಹಾಗೂ ಇನ್ನಿತರ ಸಂಘಟನೆಗಳ ಆಶ್ರಯದಲ್ಲಿ ಪಜೀರಿನ ಕಾರ್ತಿಕ್ ರಾಜ್ ಕೊಲೆ ಪ್ರಕರಣ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚುವಂತೆ ಆಗ್ರಹಿಸಿ ರವಿವಾರ ಕೊಣಾಜೆ ಪೊಲೀಸ್ ಠಾಣೆಯೆದುರು ನಡೆದ ಧರಣಿ ಸತ್ಯಾಗ್ರದಲ್ಲಿ ಭಾಗವಹಿಸಿ ಮಾತನಾಡಿದರು.

ಇಲ್ಲಿಯ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಇದ್ದರೂ ಕೂಡಾ ಕಾರ್ತಿಕ್ ರಾಜ್ ಹತ್ಯೆಯ ಆರೋಪಿಗಳು ಪತ್ತೆಯಾಗುತ್ತಿಲ್ಲ ಎಂದಾದರೆ ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ಅರ್ಥವಾಗುತ್ತಿಲ್ಲ. ಒಟ್ಟಿನಲ್ಲಿ ಕಾರ್ತಿಕ್ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಮಾತನಾಡಿ, ಕಾರ್ತಿಕ್ ರಾಜ್ ಕೊಲೆಯಾಗಿ ಹಲವಾರು ತಿಂಗಳಾದರೂ ಆರೋಪಿಗಳ ಸುಳಿವೇ ದೊರಕದೆ ಕುಟುಂಬಕ್ಕೆ ನ್ಯಾಯ ಇನ್ನೂ ದೊರಕಿಲ್ಲ. ಅಲ್ಲದೆ ರಾಜ್ಯದಲ್ಲಿ ಒಂದು ವರ್ಷದಲ್ಲಿ ಎಷ್ಟೋ ಕೊಲೆ ವಿದ್ವಂಸಕ ಕೃತ್ಯ ನಡೆದರೂ ಆರೋಪಿಗಳು ಪತ್ತೆಯಾಗುತ್ತಿಲ್ಲ. ಇದನ್ನೆಲ್ಲಾ ಗಮನಿಸುವಾಗ ಪೊಲೀಸ್ ಇಲಾಖೆಯ ನಿರ್ಲಕ್ಷ ಮಾತ್ರವಲ್ಲದೆ ಇಲ್ಲಿಯ ರಾಜ್ಯ ಸರಕಾರ ಸತ್ತಿದೆಯೋ ಅಥವಾ ಐಸಿಯುನಲ್ಲಿದೆಯೋ ಎಂದು ತಿಳಿಯುತ್ತಿಲ್ಲ ಎಂದು ಆರೋಪಿಸಿದರು.

ಕಾರ್ತಿಕ್ ರಾಜ್ ಹತ್ಯೆಯ ಆರೋಪಿಗಳನ್ನು ಪೊಲೀಸ್ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯದೆ ಬಂಧಿಸಬೇಕಿದೆ. ಇಡೀ ಸಮಾಜ ಎಚ್ಚೆತ್ತುಕೊಳ್ಳುವ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಸಾಂಸನಾಗಿ ನಾನು ಆಗ್ರಹಿಸುತ್ತೇನೆಂದು ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.

ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ಪೊಲೀಸ್ ಇಲಾಖೆ ಇನ್ನೂ ಚುರಕಾಗಿಲ್ಲ. ಅಪರಾಧಿಯನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದೀರಿ. ಅಥವಾ ರಾಜಕೀಯ ಒತ್ತಡಕ್ಕೆ ನೀವು ಮಣಿಯುತ್ತಿದ್ದೀರಿ ಎಂದರ್ಥ. ದಿನದಿಂದ ದಿನಕ್ಕೆ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದರೂ ಆರೋಪಿಗಳು ಪತ್ತೆಯಾಗುತ್ತಿಲ್ಲ ಇದಕ್ಕೆ ಈ ಭಾಗದ ಶಾಸಕರು ಪೊಲೀಸರು ಉತ್ತರಿಸಬೇಕು. ಕಾರ್ತಿಕ್ ರಾಜ್ ಹತ್ಯೆಯ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚದಿದ್ದರೆ ನಿರಂತರವಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಧರಣಿಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್, ಮುಖಂಡರಾದ ರಾಜಾರಾಂ ಭಟ್, ಚಂದ್ರಶೇಖರ್ ಉಚ್ಚಿಲ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಸತೀಶ್ ಕುಂಪಲ, ಯಶವಂತ ದೇರಾಜೆ, ನಾರಾಯಣ, ಧನಲಕ್ಷ್ಮಿ ಗಟ್ಟಿ, ಡಾ.ಮುನೀರ್ ಬಾವ, ಅಶ್ರಫ್ ಹರೇಕಳ, ನವೀನ್ ಪಾದಲ್ಪಾಡಿ, ಮನೋಜ್ ಆಚಾರ್ಯ, ಸುಜೀತ್ ಮಾಡೂರು, ಸುಭಾಷ್ ಪಡೀಲ್, ಭರತ್ ರಾಜ್ ಶೆಟ್ಟಿ, ರಾಜೇಶ್ ಶೆಟ್ಟಿ, ಜಗದೀಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News