×
Ad

ಮೇಲಂಗಡಿ ಹೊಸಪಳ್ಳಿಗೆ ಹಾರೂನ್ ಅಹ್ಸನಿ ಭೇಟಿ ನೀಡಿ

Update: 2017-03-19 17:55 IST

ಉಳ್ಳಾಲ, ಮ.19: ಉಳ್ಳಾಲ ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ)ಗೆ ಶನಿವಾರ ರಾತ್ರಿ ಎಸ್ಸೆಸ್ಸೆಫ್‌ನಿಂದ ಇತ್ತೀಚೆಗೆ ಸಮಸ್ತಕ್ಕೆ ಸೇರ್ಪಡೆಯಾದ ಹಾರೂನ್ ಅಹ್ಸನಿ ಮತ್ತು ತಂಡ ಭೇಟಿ ನೀಡಿ ಮಸೀದಿಯ ಪದಾಧಿಕಾರಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಮುಖಂಡರ ಜೊತೆ ಮಾತುಕತೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಹಾರೂನ್ ಅಹ್ಸನಿ, ಮೇಲಂಗಡಿ ಮಸೀದಿಯಲ್ಲಿ ಜುಮಾ ನಮಾಝ್ ಆರಂಭಿಸುವ ಸಂದರ್ಭ ತಾನು ಎಸ್ಸೆಸ್ಸೆಫ್‌ನಲ್ಲಿದ್ದರೂ ಜುಮಾಕ್ಕೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಯಾಕೆಂದರೆ ಜುಮಾ ಆರಂಭಿಸುವ ತೀರ್ಮಾನ ಕೈಗೊಂಡವರು ಪ್ರಮುಖ ಧಾರ್ಮಿಕ ಪಂಡಿತರಾಗಿದ್ದು, ಹರಾಂ ಎಂದು ಫತ್ವಾ ಕೊಡುವ ಅಧಿಕಾರ ಯಾರಿಗೂ ಇಲ್ಲ. ಈ ಸಂದರ್ಭ ಉಂಟಾಗಿದ್ದ ವಿವಾದವನ್ನು ಎರಡೂ ಕಡೆಯ ಧಾರ್ಮಿಕ ನೇತಾರರು ಪರಸ್ಪರ ಚರ್ಚಿಸಿ ಸೌಹಾರ್ದಯುತವಾಗಿ ಬಗೆಹರಿಸಬೇಕಿತ್ತು. ಇದೀಗ ತಾನು ಹಾಗೂ ಅನುಯಾಯಿಗಳು ಎಸ್ಕೆಎಸ್ಸೆಸ್ಸೆಫ್ ಸೇರಿದ್ದು ಮುಂದೆ ಈ ಸಂಘಟನೆಯಲ್ಲಿ ಮುಂದುವರಿಯುತ್ತೇನೆ. ಜುಮಾ ವಿವಾದ ಸಂದರ್ಭ ನಡೆದ ಘಟನೆಗಳನ್ನು ಮರೆತು ಮುಂದೆ ಜೊತೆಯಾಗಿ ಮುನ್ನಡೆಯೋಣ ಎಂದರು.

ಮೇಲಂಗಡಿ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್ ಮಾತನಾಡಿ, ಮೇಲಂಗಡಿ ಮಸೀದಿಯಲ್ಲಿ ಜುಮಾ ಯಾವ ಕಾರಣಕ್ಕೆ ಆರಂಭಿಸಲಾಗಿತ್ತು ಎನ್ನುವುದು ಬಹುತೇಕ ಜನರಿಗೆ ತಿಳಿಯದ ಕಾರಣ ತಕರಾರು ಉಂಟಾಗಿತ್ತು. ಜುಮಾ ಆರಂಭಿಸುವಲ್ಲಿ 60 ವರ್ಷದ ಹಿರಿಯರ ಶ್ರಮ ಅಪಾರವಾಗಿದೆ. ಈ ವಿಚಾರದಲ್ಲಿ ಅಂದಿನ ಉಳ್ಳಾಲ ಖಾಝಿ ಸಹಿತ ಯಾವುದೇ ಧಾರ್ಮಿಕ ಪಂಡಿತರನ್ನು ಕಡೆಗಣಿಸಿರಲಿಲ್ಲ. ಮೂರು ವರ್ಷದ ಹಿಂದೆ ಈ ವಿಚಾರದಲ್ಲಿ ಸಮುದಾಯದ ಸೌಹಾರ್ದ ಕದಡುವಂತಾಗಿದೆ. ಧಾರ್ಮಿಕ ವಿಚಾರದಲ್ಲಿ ತಪ್ಪುಕಂಡುಬಂದರೆ ಅದನ್ನು ತಿಳಿಹೇಳುವ ಕೆಲಸ ಧರ್ಮ ಗುರುಗಳದ್ದಾಗಿದೆ. ಇದರಿಂದ ಸಮಾಜ ಸಧೃಡವಾಗುತ್ತದೆ. ಮನುಷ್ಯನಲ್ಲಿ ತಪ್ಪುಗಳಾಗುವುದು ಸಹಜ. ಕ್ಷಮಿಸುವುದು ದೊಡ್ಡ ಗುಣ ಎಂದು ಅಭಿಪ್ರಾಯಪಟ್ಟರು.

 ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಸಮೀಮ್ ಸಖಾಫಿ ಜಲ್ಲಿ, ಧಾರ್ಮಿಕ ಗುರುಗಳಾದ ಝೈನ್ ಸಖಾಫಿ, ಹಾಫಿಲ್ ಜುನೈದ್, ಹಾಫಿಲ್ ನಯೀಮ್ ಬೆಳ್ಮ, ಮುಹಿಯುದ್ದೀನ್ ಮಸೀದಿಯ ಉಪಾಧ್ಯಕ್ಷ ಬಶೀರ್ ಗುಂಡಿಹಿತ್ಲು, ಕಾರ್ಯದರ್ಶಿ ಅಬ್ದುಲ್ ರಝಾಕ್ ಹರೇಕಳ, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಜೊತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಸದಸ್ಯರಾದ ಬಾವಾ ಫಕೀರ್ ಸಾಹೇಬ್, ಜಮಾಲ್ ಬಾರ್ಲಿ, ಸಂಶುಲ್ ಉಲಮಾ ಕ್ರಿಯಾ ಸಮಿತಿಯ ಅಧ್ಯಕ್ಷ ಯು.ಟಿ. ಮುಹಮ್ಮದ್, ಉಪಾಧ್ಯಕ್ಷ ಕೆ.ಎಸ್.ಮುಹಿಯುದ್ದೀನ್, ಪ್ರಮುಖರಾದ ಅಶ್ರಫ್ ಮೇಲಂಗಡಿ, ರಹೀಂ ಮುಟ್ಟಿಕ್ಕಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News