×
Ad

ಸ್ವಾಮಿನಾಥನ್ ವರದಿ ಜಾರಿಗೊಳಿಸದೆ ರೈತರಿಗೆ ದ್ರೋಹ ಬಗೆದ ಕೇಂದ್ರ ಸರಕಾರ: ಮಾರುತಿ ಮಾನ್ಪಡೆ

Update: 2017-03-19 18:13 IST

ಮಂಗಳೂರು.ಮಾ,19:ದೇಶದಲ್ಲಿ ಸ್ವಾಮಿನಾಥನ್ ವರದಿ ಜಾರಿಗೊಳಿಸದೆ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ರೈತರಿಗೆ ದ್ರೋಹ ಬಗೆದಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದ್ದಾರೆ.

  ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಕುತ್ತಾರಿನ ಮುನ್ನೂರು ಯುವಕ ಮಂಡಲ ಸಭಾಂಗಣದಲ್ಲಿ ಹಮ್ಮಿಕೊಂಡ ದ.ಕ ಜಿಲ್ಲಾ ರೈತ ಸಮ್ಮೇಳನವನ್ನು ಅವರು ಇಂದು ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದಲ್ಲಿ ಸ್ವಾಮಿನಾಥನ್ ವರದಿಯ ಪ್ರಕಾರ ಕೇಂದ್ರ ಸರಕಾರ ಬೆಂಬಲ ಬೆಲೆಯನ್ನು ಘೋಷಿಸಿಲ್ಲ. ರೈತರಿಗೆ ಬೆಳೆಹಾನಿಯಾದಾಗ ಅವರಿಗೆ ಸೂಕ್ತ ಬೆಳೆಹಾನಿಯನ್ನು ನೀಡುತ್ತಿಲ್ಲ.ರೈತರ ಕಲ್ಯಾಣ ನಿಧಿಯನ್ನು ಮಾಡಿಕೊಂಡಿರುವ ಕೇಂದ್ರಸರಕಾರ ಖಾಸಗಿ ವಿಮಾ ಕಂಪೆನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.ಒಂದು ಗ್ರಾಮ ಪಂಚಾಯತ್‌ನಲ್ಲಿ ಏಳು ವರ್ಷದ ಬೆಳೆಹಾನಿಯನ್ನು ಗಮನಿಸಿ ಈ ಕಂಪೆನಿಗಳ ಪರಿಹಾರ ನೀಡುವ ನೀತಿ ಇದೆ.ಇದರಿಂದ ರೈತರಿಗೆ ನ್ಯಾಯಯುತವಾಗಿ ಪರಿಹಾರ ದೊರೆಯಲು ಸಾಧ್ಯವಿಲ್ಲ.ದೇಶದಲ್ಲಿ ರೈತರ ಕಲ್ಯಾಣ ನಿಧಿಯ ದುರುಪಯೋಗವಾಗುತ್ತಿದೆ ಇದನ್ನು ತಡೆಯಲು ಸಂಘಟಿತ ಹೋರಾಟ ನಡೆಯಬೇಕಾಗಿದೆ ಎಂದು ಮಾರುತಿ ಮಾನ್ಪಡೆ ತಿಳಿಸಿದ್ದಾರೆ.

ದೇಶದಲ್ಲಿ ಕಾರಿಡಾರ್ ರಚನೆಯ ಹೆಸರಿನಲ್ಲಿ ರೈತರ ಭೂಮಿಯನ್ನು ಬ್ರಿಟೀಷರಿಗಿಂತಲೂ ಕೆಟ್ಟರೀತಿಯಲ್ಲಿ ವಶಪಡಿಸಿಕೊಳ್ಳಲು ನೀತಿಯನ್ನು ರೂಪಿಸಲಾಯಿತು.ಹೊರ ದೇಶಗಳ ವಿದೇಶಿ ಕಂಪೆನಿಗಳಿಗೆ ದೇಶದ ರೈತರ ಭೂಮಿಯನ್ನು ಆಹ್ವಾನಿಸಿ ಕೊಡಲು ಮೋದಿ ವಿದೇಶಿ ಪ್ರವಾಸ ಕಯಗೊಳ್ಳುತ್ತಿದ್ದಾರೆ.ಕೇಂದ್ರ ಸರಕಾರ ದೇಶದ ರೈತರ ಭೂಮಿ ವಿದೇಶಿ ಕಂಪೆನಿಗಳಿಗೆ ಮಾರಾಟ ಮಾಡಲು ಹೊರಟಿರುವ ನೀತಿಯ ವಿರುದ್ಧ ದೇಶಾದ್ಯಂತ ರೈತ ಸಂಘಟನೆಗಳ ತೀವ್ರ ಪ್ರತಿರೋಧವನ್ನು ಸರಕಾರ ಎದುರಿಸಬೇಕಾಯಿತು ಎಂದು ಮಾರುತಿ ಮಾನ್ಪಡೆ ತಿಳಿಸಿದ್ದಾರೆ.

ಆಸಮರ್ಪಕ ಆಮದು ನೀತಿಯಿಂದ ಬೆಲೆ ಕುಸಿತ:

ದೇಶದಲ್ಲಿ ಸಮರ್ಪಕವಾದ ಆಮದು ನೀತಿಯ ಪರಿಣಾಮವಾಗಿ ಹೊರದೇಶಗಳಿಂದ ತೆಂಗು,ಬೇಳೆಕಾಳುಗಳನ್ನು ಆಮದು ಮಾಡಲು ಅವಕಾಶ ನೀಡುತ್ತಿರುವುದು ಸ್ಥಳೀಯವಾಗಿ ತೆಂಗು, ಅಡಿಕೆ, ಗೋಡಂಬಿ ಬೆಳೆಗಳ ಬೆಲೆ ಕುಸಿತಕ್ಕೆ ಕಾರಣವಾಗಿದೆ.ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಅಧಾನಿಯಂತಹ ಕಂಪೆನಿಗಳಿಗೆ ಹೇರಳವಾಗಿ ಬೇಳೆಕಾಳು ಆಮದು ಮಾಡಲು ಅವಕಾಶಕಲ್ಪಿಸಿದೆ.ಅವರಿಂದ ಹೆಚ್ಚಿನ ಬೆಲೆ ನೀಡಿ ಬೇಳೆ ಕಾಳು ಪಡೆಯುತ್ತಿದೆ.ಕಳೆದ ಒಂದು ವರ್ಷದಲ್ಲಿ ಅಧಾನಿ ಕಂಪೆನಿಯೊಂದೇ 100ಲಕ್ಷ ಟನ್ ಬೇಳೆ ಕಾಳನ್ನು ವಿದೇಶದಿಂದ ಆಮದು ಮಾಡಿಕೊಂಡಿದೆ.ದೇಶದಲ್ಲಿ ರೈತರ ಸರಾಸರಿ ಆದಾಯ ತಿಂಗಳಿಗೆ ಸರಾಸರಿ ಸುಮಾರು 6ಸಾವಿರ ,ಖರ್ಚು 9 ಸಾವಿರ ಎಂದು ಅಂದಾಜಿಸಲಾಗಿದೆ.

ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್,ಬಿಜೆಪಿ ಸರಕಾರಗಳ ರೈತ ವಿರೋಧಿ ನೀತಿಗಳ ಪರಿಣಾಮವಾಗಿ ಕರ್ನಾಟಕದಲ್ಲಿ ರೈತರ ಆತ್ಮ ಹತ್ಯೆ ನಡೆಯುತ್ತಿದೆ.ರೈತರ ಕುಟುಂಬವನ್ನು ಸಾಲದ ದವಡೆಯಿಂದ ತಪ್ಪಿಸಬೇಕಾದರೆ ಪ್ರತಿ ಕುಟುಂಬಕ್ಕೆ ಕನಿಷ್ಠ 18 ಸಾವಿರ ಆದಾಯ ದೊರೆಯುವಂತಾಗಬೇಕು ಎಂದು ಮಾರುತಿ ಮಾನ್ಪಡೆ ತಿಳಿಸಿದ್ದಾರೆ.ರಾಜ್ಯದಲ್ಲಿ ಹಾಗೂ ದ.ಕ ಜಿಲ್ಲೆಯಲ್ಲೂ ಭೂ ರಹಿತ ಕೃಷಿ ಕುಂಟಂಬಗಳಿವೆ.ಈ ಕುಟುಂಬಗಳಿಗೆ ಸರಕಾರ ನೆರವು ನೀಡಬೇಕಾದರೆ ಎಲ್ಲರಿಗೂ ಭೂಮಿ ದೊರೆಯುವಂತಾಗಬೇಕು ರಾಜ್ಯದಲ್ಲಿ ಇನ್ನೊಮ್ಮೆ ಸಮಗ್ರ ಭೂಮಸೂದೆ ಜಾರಿಯಾಗಬೇಕಾದ ಅಗತ್ಯವಿದೆ ಇದಕ್ಕಾಗಿ ರಾಜ್ಯದ ರೈತ ಸಂಘಟನೆಗಳು ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದು ಮಾರುತಿ ಮಾನ್ಪಡೆ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಿಪಿಐ(ಎಂ)ನ ಹಿರಿಯ ಕೆ.ಆರ್.ಶ್ರೀಯಾನ್ ಮಾತನಾಡುತ್ತಾ, ದ.ಕ ಜಿಲ್ಲೆಯಲ್ಲಿ ಕಾ.ಕೃಷ್ಣ ಶೆಟ್ಟಿ,ಅಬ್ರಹಾಂ ಕರ್ಕಡರಂತಹ ರೈತ ಮುಖಂಡರ ಪ್ರಯತ್ನದಿಂದ ಸಾಕಷ್ಟು ರೈತರಿಗೆ ಭೂಸುಧಾರಣೆಯ ಸಂದರ್ಭದಲ್ಲಿ ಭೂಮಿ ದೊರೆಯಲು ಕಾರಣವಾಗಿದೆ.ಸರಕಾರದ ರೈತ ವಿರೋಧಿ ನೀತಿಯಿಂದ ದೇಶಾದ್ಯಂತ ರೈತರ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಈ ನೀತಿಯ ವಿರುದ್ಧ ಸಾಮೂಹಿಕವಾದ ರೈತ ಪರ ಹೋರಾಟ ನಡೆಯಬೇಕಾಗಿದೆ ಎಂದು ಕೆ.ಆರ್.ಶ್ರೀಯಾನ್ ತಿಳಿಸಿದರು.

ಸಮಾರಂಭದಲ್ಲಿ ರೈತ ಸಂಘದ ಮುಖಂಡರಾದ ಯಾದವ ಶೆಟ್ಟಿ,ಬಾಲಕೃಷ್ಣ ಸಾಲ್ಯನ್,ಶ್ರೀನಿವಾಸ್ ಆಳ್ವ,ಕೃಷ್ಣಪ್ಪ ಸಾಲ್ಯಾನ್,ಸಂಜೀವ ಭಂಡಾರಿ,ಲೋಕಯ್ಯ ಶೆಟ್ಟಿ,ಸಂಜೀವ ಪಿಲಾರು ಮೊದಲಾದವರು ಉಪಸ್ಥಿತರಿದ್ದರು.ಗಂಗಯ್ಯ ಗಟ್ಟಿ ಧ್ವಜಾರೋಹಣ ನೆರವೇರಿಸಿದರು.ವಾಸುದೇವ ಉಚ್ಚಿಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News