ಹಿಜಬ್ ಧರಿಸಿದ್ದಕ್ಕಾಗಿ ವಿದ್ಯಾರ್ಥಿನಿಗೆ ಬಾಸ್ಕೆಟ್‌ಬಾಲ್ ಪಂದ್ಯ ಆಡಲು ಅವಕಾಶ ನಿರಾಕರಣೆ!
ವಾಶಿಂಗ್ಟನ್,ಮಾ.18: ಹಿಜಬ್ ಧರಿಸುತ್ತಾಳೆಂಬ ಕಾರಣಕ್ಕಾಗಿ 16 ವರ್ಷದ ಮುಸ್ಲಿಂ ಹೈಸ್ಕೂಲ್ ವಿದ್ಯಾರ್ಥಿನಿಗೆ ಪ್ರಾದೇಶಿಕ ಬಾಸ್ಕೆಟ್‌ಬಾಲ್ ಪಂದ್ಯದ ಫೈನಲ್‌ನಲ್ಲಿ ಆಡಲು ಅವಕಾಶ ನಿರಾಕರಿಸಿದ ಘಟನೆ ಅಮೆರಿಕದಲ್ಲಿ ವರದಿಯಾಗಿದೆ.
ಮೇರಿಲ್ಯಾಂಡ್‌ನ ಗೈದರ್ಸ್‌ಬರ್ಗ್‌ನಲ್ಲಿರುವ ವಾಟ್ಕಿನ್ಸ್ ಮಿಲ್ ಹೈಸ್ಕೂಲ್ ವಿದ್ಯಾರ್ಥಿನಿ ಜೆನಾನ್ ಹಾಯೆಸ್, ಹಾಲಿ ಋತುವಿನ ಮೊದಲ 24 ಪಂದ್ಯಗಳಲ್ಲಿ ಯಾವುದೇ ಸಮಸ್ಯೆಯೆದುರಿಸದೆ ಆಡಿದ್ದರು. ಆದರೆ ಫೈನಲ್ಸ್ ಪ್ರವೇಶಿಸಿದಾಗ ಹಾಯೆಸ್ ಕಲಿಯುತ್ತಿರುವ ಹೈಸ್ಕೂಲ್‌ನ ಆಡಳಿತಮಂಡಳಿಯು ಆಕೆ ಹಿಜಬ್ ಧರಿಸುತ್ತಾರೆಂಬ ಕಾರಣ ನೀಡಿ, ಪಂದ್ಯದಲ್ಲಿ ಆಡುವುದನ್ನು ನಿಷೇಧಿಸಿತು.
ಇದರಿಂದಾಗಿ ಮಾರ್ಚ್ 3ರಂದು ಗೈದರ್ಸ್‌ಬರ್ಗ್‌ನಲ್ಲಿ ನಡೆದ ಪ್ರಾದೇಶಿಕ ಹೈಸ್ಕೂಲ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಹಾಯೆಸ್‌ಗೆ ಆಡಲು ಸಾಧ್ಯವಾಗಲಿಲ್ಲ. ಆಕೆ ಹಿಜಬ್ ಧರಿಸುತ್ತಿರುವುದರಿಂದ ಆಕೆಗೆ ಆಡಲು ಅವಕಾಶ ನೀಡುವುದಿಲ್ಲವೆಂದು ಕೋಚ್‌ಗಳು ತಿಳಿಸಿದ್ದರೆನ್ನಲಾಗಿದೆ.
ಈ ನಿಯಮದ ಬಗ್ಗೆ ತಮಗೆ ಯಾರೂ ಕೂಡಾ ಮಾಹಿತಿ ನೀಡಿರಲಿಲ್ಲವೆಂದು ಹಾಯೆಸ್ ಅವರ ಕೋಚ್ ಡೋನಿಟಾ ಆ್ಯಡಮ್ಸ್ ತಿಳಿಸಿದ್ದಾರೆ. ಶಾಲಾಮಂಡಳಿಯ ನಿರ್ಧಾರದಿಂದ ತನಗೆ ತುಂಬಾ ಬೇಸರವಾಗಿದೆ ಹಾಗೂ ರೋಷವುಂಟಾಗಿದೆ. ಹಿಜಬ್ ಧರಿಸಬಾರದೆಂಬ ನಿಯಮವು ತಾರತಮ್ಯದಿಂದ ಕೂಡಿದ್ದಾಗಿದೆ ಎಂದು ಬಾಲಕಿ ಹಾಯೆಸ್ ಹೇಳಿದ್ದಾರೆ.
ಶಾಲಾಮಂಡಳಿಯ ಕ್ರಮಕ್ಕೆ ಮೇರಿಲ್ಯಾಂಡ್‌ನ ಅಮೆರಿಕನ್-ಇಸ್ಲಾಮಿಕ್ ಬಾಂಧವ್ಯಗಳ ಮಂಡಳಿ(ಸಿಎಐಆರ್) ಅಸಮಾಧಾನ ವ್ಯಕ್ತಪಡಿಸಿದೆ. ‘‘ ದೇಶದಲ್ಲಿ ಧಾರ್ಮಿಕ ತಾರತಮ್ಯ ಹೆಚ್ಚುತ್ತಿರುವ ಹೊರತಾಗಿಯೂ, ನ್ಯಾಯಾಲಯ ಯಾವುದೇಪಾತ್ರವನ್ನು ವಹಿಸುತ್ತಿಲ್ಲವೆಂದು ಸಿಎಐರ್‌ನ ಅಧ್ಯಕ್ಷ ಝೈನಾಬ್ ಚೌಧುರಿ ತಿಳಿಸಿದ್ದಾರೆ. ಹಾಯೆಸ್ ಆಡದೆ ಇದ್ದ ಫೆನಲ್ಸ್ ಪಂದ್ಯದಲ್ಲಿ ಆಕೆಯ ತಂಡವು ಪರಾಭವಗೊಂಡಿತ್ತು.