×
Ad

ಉಡುಪಿ: ​ಡ್ರೋಣ್ ಮೂಲಕ ಮೋಡ ಬಿತ್ತನೆ ಪ್ರಾತ್ಯಕ್ಷಿಕೆ

Update: 2017-03-19 22:26 IST

 ಉಡುಪಿ, ಮಾ.19: ಕಾರ್ಕಳ ಸ್ಕೈ ವೀವ್ ಸಿಸ್ಟಮ್‌ನ ರತ್ನಾಕರ್ ನಾಯಕ್ ಅಭಿವೃದ್ಧಿ ಪಡಿಸಿದ ಸ್ವಯಂ ಚಾಲಿತ ಡ್ರೋಣ್ ಮೂಲಕ ಮೋಡ ಬಿತ್ತನೆ ಕಾರ್ಯದ ಪ್ರಾತ್ಯಕ್ಷಿಕೆಯು ರವಿವಾರ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಯಿತು.

 ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಸಮ್ಮುಖದಲ್ಲಿ ಪೈಲಟ್ ನೆರವಿಲ್ಲದೆ, ಮಾನವ ರಿಮೋಟ್ ಕಂಟ್ರೋಲ್ ರಹಿತವಾಗಿ ಸ್ವಯಂ ಚಾಲಿತ ಡ್ರೋಣ್ ಮೂಲಕ ಮೋಡ ಬಿತ್ತನೆಯ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು.

1.5ಕೆ.ಜಿ. ತೂಕದ ಸಣ್ಣ ಡ್ರೋಣ್‌ನಲ್ಲಿ ಪೈರೋಪ್ಲೆರ್ ಮಿಶ್ರಣವನ್ನು ಅಳವಡಿಸಿ ಸುಮಾರು 200 ಮೀಟರ್ ಎತ್ತರದಲ್ಲಿ ಸಿಡಿಸುವ ಮೂಲಕ ಮೋಡ ಬಿತ್ತನೆಯ ಮಾದರಿ ಯನ್ನು ಸಚಿವರಿಗೆ ವಿವರಿಸಲಾಯಿತು. ಸರಕಾರ ಮುಂದೆ ಇವರಿಗೆ ಅನುಮತಿ ನೀಡಿದರೆ ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶನಕ್ಕೆ ಇಡ ಲಾಗಿದ್ದ 15 ಕೆ.ಜಿ.ತೂಕದ ಡ್ರೋಣ್‌ನಲ್ಲಿ ಮೋಡ ಬಿತ್ತನೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರತ್ನಾಕರ್ ನಾಯಕ್, ಈಗಿನ ತಂತ್ರ ಜ್ಞಾನದಂತೆ ವಿಮಾನದಲ್ಲಿ ಎರಡು ಪೈಲೆಟ್ ಸಹಿತ ವಿಜ್ಞಾನಿಗಳು ಏರ್ ಪೋರ್ಟ್‌ನಿಂದ ಮೋಡ ಇದ್ದಲ್ಲಿಗೆ ಹೋಗಿ ಮೋಡ ಬಿತ್ತನೆ ಮಾಡುತ್ತಿದ್ದರು. ಅವರು ಇಷ್ಟು ದೊಡ್ಡ ವಿಮಾನದಲ್ಲಿ ಕೇವಲ 5ರಿಂದ 10 ಕೆ.ಜಿ. ಸಿಲ್ವರ್ ಅಯೋಡೈಡ್ ಮಿಶ್ರಣವನ್ನು ಮಾತ್ರ ತೆಗೆದುಕೊಂಡು ಹೋಗಿ ಬಿತ್ತನೆ ಮಾಡುತ್ತಾರೆ. ಇಷ್ಟು ಕಡಿಮೆ ಪ್ರಮಾಣದ ಮಿಶ್ರಣ ಕೊಂಡೊಯ್ಯಲು ವಿಮಾನವನ್ನು ಅವಲಂಬಿಸಬೇಕಾಗುತ್ತದೆ. ಇದರಿಂದ ಈ ತಂತ್ರಜ್ಞಾನದ ನಿರ್ವಹಣಾ ಖರ್ಚು ಬಹಳ ದುಬಾರಿ ಎಂದರು.

 ಇದೀಗ ನಾವು ಇದೇ ರೀತಿಯಲ್ಲಿ ಮೋಡ ಬಿತ್ತನೆ ಮಾಡಲು ಡ್ರೋಣ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದು, ಇದರಲ್ಲಿಯೂ 10ಕೆ.ಜಿ.ಯಷ್ಟು ಮಿಶ್ರಣವನ್ನು ತೆಗೆದುಕೊಂಡು ಹೋಗಿ ಮೋಡ ಬಿತ್ತನೆ ಮಾಡಬಹುದಾಗಿದೆ. ಇದು ಬಹಳಷ್ಟು ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಈಗಾಗಲೇ ಇದರ ಪ್ರಾಯೋಗಿಕ ಹಾರಾಟ ಮಾಡಿ ಯಶಸ್ವಿಯಾಗಿದ್ದೇವೆ. ಮುಂದೆ ಇದಕ್ಕೆ ಸರಕಾರದ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು.

ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಡ್ರೋಣ್ ಮೂಲಕ ಮೋಡ ಬಿತ್ತನೆ ಮಾಡುವ ಅವಿಷ್ಕಾರವು ಯಶಸ್ವಿ ಯಾದರೆ ಸರಕಾರಕ್ಕೆ ವರದಾನವಾಗಲಿದೆ. ಈವರೆಗೆ ವಿಮಾನದ ಮೂಲಕ ಮೋಡ ಬಿತ್ತನೆ ಮಾಡಲಾಗುತ್ತಿತ್ತು. ಇದೀಗ ಅದೇ ಕಾರ್ಯವನ್ನು ಸಣ್ಣ ಡ್ರೋಣ್‌ನಲ್ಲೂ ಮಾಡಬಹುದು ಎಂಬುದನ್ನು ರತ್ನಾಕರ್ ತೋರಿಸಿದ್ದಾರೆ ಎಂದು ಹೇಳಿದರು.

ಈ ಹೊಸ ತಂತ್ರಜ್ಞಾನದ ಪ್ರಯೋಗ ಮಾಡಲು ಇವರಿಗೆ ಸರಕಾರದ ಅನುಮತಿ ಮತ್ತು ಹಣಕಾಸು ನೆರವು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ರತ್ನಾಕರ್ ನಾಯಕ್‌ರನ್ನು ಬೆಂಗಳೂರಿನಲ್ಲಿ ಕೃಷಿ ಸಚಿವರೊಂದಿಗೆ ಭೇಟಿ ಮಾಡಿಸಿ, ಅಗತ್ಯ ಬಿದ್ದರೆ ಮುಖ್ಯಮಂತ್ರಿಯನ್ನು ಕೂಡ ಭೇಟಿ ಮಾಡಿಸಿ ಮಾತುಕತೆ ನಡೆಸಲಾಗುವುದು. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯ ಜನಾರ್ದನ ಭಂಡಾರ್ಕರ್, ಉಡುಪಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಆ್ಯರೋನಾಟಿಕಲ್ ಇಂಜಿನಿಯರ್ ಪ್ರಜ್ವಲ್ ಹೆಗ್ಡೆ ಬೈಲೂರು ಉಪಸ್ಥಿತರಿದ್ದರು. ದಿವಾಕರ್ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News