ಚಾಲಕನ ನಿಯಂತ್ರಣದ ತಪ್ಪಿದ ಕಾರು ಸಂಪೂರ್ಣ ನಜ್ಜುಗುಜ್ಜು
ಮುಲ್ಕಿ, ಮಾ.19: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಬಳಿಕ ಮುಂದಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ ಸೇತುವೆ ಬಳಿ ರವಿವಾರ ರಾತ್ರಿ ನಡೆದಿದೆ.
ಗಾಯಗೊಂಡವರನ್ನು ಹಳೆಯಂಗಡಿ ಇಂದಿರಾನಗರ ನಿವಾಸಿಗಳಾದ ಫೈಝಲ್ ಮತ್ತು ಶಿಝಾಝ್ ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಹಳೆಯಂಗಡಿ ಕಡೆಗೆ ಹೋಗುತ್ತಿದ್ದ ಕಾರು ಅತೀ ವೇಗದಿಂದ ಚಾಲನೆ ಮಾಡಿಕೊಂಡು ಪಾವಂಜೆ ಸೇತುವೆ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಬಳಿಕ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿತೆನ್ನಲಾಗಿದೆ.
ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಲಾರಿಗೂ ಹಾನಿಯಾಗಿದೆ. ಕಾರಿನಲ್ಲಿದ್ದ ಹಳೆಯಂಗಡಿ ಇಂದಿರಾನಗರದ ನಿವಾಸಿಗಳಾದ ಫೈಝಲ್ ಮತ್ತು ಶಿಫಾಝ್ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದಿಂದ ಹೆದ್ದಾರಿ ಸಂಚಾರ ವ್ಯತ್ಯಯಗೊಂಡಿದ್ದು, ಕೂಡಲೇ ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆಯಲ್ಲಿದ್ದ ಎರಡೂ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.