ಉಡುಪಿ ಎಲ್ಲ ಗ್ರಾಮಗಳಿಗೆ ಬಹುಗ್ರಾಮ ಯೋಜನೆ: ಪ್ರಮೋದ್
ಬ್ರಹ್ಮಾವರ, ಮಾ.19: ಉಡುಪಿ ವಿಧಾನ ಸಭಾ ಕ್ಷೇತ್ರದ ಎಲ್ಲ ಗ್ರಾಮ ಗಳಿಗೂ ಬಹುಗ್ರಾಮ ಯೋಜನೆಯಡಿ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಲಾಗು ವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಬ್ರಹ್ಮಾವರ ತಾಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ನಗರ ಘಟಕದ ವತಿಯಿಂದ ರವಿವಾರ ಬ್ರಹ್ಮಾವರ ಬಂಟರ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಬ್ರಹ್ಮಾವರದ ಅಭಿವೃದ್ಧಿಯೊಂದಿಗೆ ಕುಡಿಯುವ ನೀರಿನ ಸಮಸ್ಯೆ, ಒಳ ಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಹಂತ ಹಂತವಾಗಿ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಉಡುಪಿ, ಕಾಪು, ಬ್ರಹ್ಮಾವರ ತಾಲೂಕುಗಳಿಗೆ ಯಾವ ಗ್ರಾಮಗಳನ್ನು ಸೇರಿಸಬೇಕು ಎನ್ನುವ ಬಗ್ಗೆ ಗ್ರಾಮದ ಜನತೆಯೊಂದಿಗೆ ಚರ್ಚಿಸಿ ನಿರ್ಧರಿಸ ಲಾಗುವುದು. ಉಡುಪಿ ಬ್ರಹ್ಮಾವರ ತಾಲ್ಲೂಕುಗಳನ್ನು ರಾಜ್ಯದಲ್ಲಿಯೇ ಮಾದರಿ ತಾಲ್ಲೂಕು ಆಗಿ ಪರಿವರ್ತಿಸಲು ಶ್ರಮಿಸಲಾಗುವುದು ಎಂದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಪಂ ಸದಸ್ಯರಾದ ಜನಾದರ್ನ ತೋನ್ಸೆ, ಮೈರ್ಮಾಡಿ ಸುಧಾಕರ ಶೆಟ್ಟಿ, ತಾಪಂ ಸದಸ್ಯೆ ಗೋಪಿ ಕೆ.ನಾಯ್ಕ, ಮುಖಂಡರಾದ ಚಂದ್ರಶೇಖರ್ ಹೆಗ್ಡೆ, ಭಾಸ್ಕರ್ ರೈ, ಚಂದ್ರಶೇಖರ್ ಹೆಗ್ಡೆ, ಆಲ್ವಿನ್ ಅಂದ್ರಾದೆ, ಮೈರ್ಮಾಡಿ ಅಶೋಕ್ ಶೆಟ್ಟಿ, ಸತೀಶ್ ಅಮೀನ್, ಸಂಜಿವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಶೆಟ್ಟಿ ಸ್ವಾಗತಿಸಿದರು. ಶಂಶುದ್ಧೀನ್ ಮತ್ತು ರಮೇಶ್ ಕರ್ಕೆರಾ ಕಾರ್ಯಕ್ರಮ ನಿರೂಪಿಸಿದರು.