×
Ad

ಅಪಹರಣಗೊಂಡಿದ್ದ ವಿಟ್ಲದ ಯುವಕ ಪತ್ತೆ

Update: 2017-03-19 23:17 IST

ಬಂಟ್ವಾಳ, ಮಾ. 19: ತಂಡವೊಂದರಿಂದ ಅಪಹರಣಕೀಡಾದ ವಿಟ್ಲದ ಕಂಬಳಬೆಟ್ಟು ದರ್ಗಾ ಸಮೀಪದ ನಿವಾಸಿ ಮೋನು ಯಾನೆ ರಝಾಕ್(30) ದೇರಳಕಟ್ಟೆಯಲ್ಲಿ ಪತ್ತೆಯಾಗಿದ್ದಾರೆ. ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಆತಂಕದಲ್ಲಿದ್ದ ವಿಟ್ಲದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಅಪಹರಣಕಾರರು ರಝಾಕ್‌ಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ.

ರವಿವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ಕಾರಿನಲ್ಲಿ ಬಂದ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಹನೀಫ್ ಯಾನೆ ಜೋಗಿ ಹನೀಫ್ ಇದ್ದ ನಾಲ್ವರ ತಂಡ ರಝಾಕ್‌ನನ್ನು ಅಪಹರಿಸಿ ಪರಾರಿಯಾಗಿತ್ತು. ರಝಾಕ್ ತನ್ನ ಸ್ನೇಹಿತ ಮನ್ಸೂರು ಎಂಬಾತನ ಬೈಕಿನಲ್ಲಿ ವಿಟ್ಲದಿಂದ ಒಕ್ಕೆತ್ತೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಕೂಡಲೇ ಮನ್ಸೂರು ನೀಡಿದ ಮಾಹಿತಿಯಂತೆ ಕಾರ್ಯಪ್ರವೃತ್ತರಾದ ವಿಟ್ಲ ಠಾಣಾಧಿಕಾರಿ ನಾಗರಾಜ್ ನೇತೃತ್ವದ ಪೊಲೀಸರ ತಂಡ ಮಂಗಳೂರು, ಪುತ್ತೂರು, ಕೋಣಾಜೆ,ಉಪ್ಪಿನಂಗಡಿ, ಮೂಡಬಿದ್ರೆ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿ ಅಪಹರಣಕಾರರ ಪತ್ತೆಗೆ ಬಿರುಸಿನ ಕಾರ್ಯಾಚರಣೆ ನಡೆಸಿದೆ.

ಈ ನಡುವೆ ರಝಾಕ್‌ನನ್ನು ದೇರಳಕಟ್ಟೆಗೆ ಕಡೆಗೆ ಅಪಹರಿಸಿದ ಅಪಹರಣಕಾರರು ಕೋಳಿ ಅಂಕಕ್ಕೆ ಬಳಸುವ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಬಳಿಕ ದೇರಳಕಟ್ಟೆಯಲ್ಲಿ ರಝಾಕ್‌ನನ್ನು ಕಾರಿನಿಂದ ಇಳಿಸಿ ಅದೇ ಕಾರಿನಲ್ಲಿ ಅಪಹರಣಕಾರರು ಪರಾರಿಯಾಗಿದ್ದಾರೆ. ಗಾಯಗೊಂಡ ರಝಾಕ್‌ನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ವಿಟ್ಲದ ಹೊಟೇಲ್ ಒಂದರ ಬಳಿ ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಜೋಗಿ ಹನೀಫ್ ಮೇಲೆ ಹಲ್ಲೆ ನಡೆದಿದೆ. ಇದಕ್ಕೆ ಪ್ರತಿಕಾರವೆಂಬಂತೆ ಈ ಅಪಹರಣ ನಡೆದಿದೆ ಎಂದು ಶಂಕಿಸಲಾಗಿದೆ.

ಮನ್ಸೂರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದರು ವಿಟ್ಲ ಠಾಣೆ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್. ನೇತೃತ್ವದಲ್ಲಿ ಅಪಹರಣಕಾರರ ಬಂಧನಕ್ಕೆ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News