ಅಭಿವೃದ್ಧಿಗೊಂಡರೂ ಅಪಘಾತ ವಲಯವಾಗಿಯೇ ಉಳಿದ ಮೆಲ್ಕಾರ್!

Update: 2017-03-19 18:44 GMT

* ರಸ್ತೆ ವಿಭಜಕವಿಲ್ಲದೆ ವಾಹನಗಳ ಅಡ್ಡಾದಿಡ್ಡಿ ಸಂಚಾರ

* ಆಟೊ ನಿಲ್ದಾಣ, ಖಾಸಗಿ ವಾಹನಗಳ ಪಾರ್ಕಿಂಗ್‌ಗಿಲ್ಲ ಸೂಕ್ತ ವ್ಯವಸ್ಥೆ

ಬಂಟ್ವಾಳ, ಮಾ.19: ಸಾರ್ವಜನಿಕರ ನಿರೀಕ್ಷೆಗೂ ಮೀರಿ ಅಭಿವೃದ್ಧಿಗೊಂಡಿರುವ ಮೆಲ್ಕಾರ್‌ನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದರಿಂದ ಈ ಪ್ರದೇಶ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ರಸ್ತೆ ವಿಭಜಕ, ಟ್ರಾಫಿಕ್ ಪೊಲೀಸ್ ಇಲ್ಲದಿರುವುದರಿಂದ ವಾಹನಗಳ ಅಡ್ಡಾದಿಡ್ಡಿ ಸಂಚಾರವು ದಿನನಿತ್ಯ ಸಣ್ಣ ಪುಟ್ಟ ಅಪಘಾತಗಳಿಗೆ ಕಾರಣವಾಗುವುದು ಇಲ್ಲಿ ಸಾಮಾನ್ಯವಾಗಿದೆ. ಬಂಟ್ವಾಳ ತಾಲೂಕಿನ ಪ್ರಮುಖ ವ್ಯಾವಹಾರಿಕ ಕೇಂದ್ರಗಳಲ್ಲಿ ಒಂದಾಗಿರುವ ಮೆಲ್ಕಾರ್ ಕಿರಿದಾಗಿದ್ದ ರಸ್ತೆಯಿಂದಾಗಿ ಸಂಕಷ್ಟಕ್ಕೊಳಗಾಗಿತ್ತು. ಇಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದರಿಂದ ಬಿ.ಸಿ.ರೋಡ್-ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಮುಕ್ತ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತು. ಈ ಬಗ್ಗೆ ಒಂದೆಡೆ ಸಾರ್ವಜನಿಕ ವಲಯದಿಂದ ಆಕ್ರೋಶ, ಅಸಮಾಧಾನ ವ್ಯಕ್ತವಾಗುತ್ತಿದ್ದರೆ ಇನ್ನೊಂದೆಡೆ ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದರು. ಈ ಸಂಕಷ್ಟವನ್ನು ಮನಗಂಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಂಟ್ವಾಳ ಶಾಸಕ ಬಿ.ರಮಾನಾಥ ರೈ ಮುತುವರ್ಜಿ ವಹಿಸಿ ಮೆಲ್ಕಾರ್ ಜಂಕ್ಷನ್‌ನನ್ನು ಅಭಿವೃದ್ಧಿಗೊಳಿಸಿದರು. ರಸ್ತೆಯ ಎರಡೂ ಬದಿಯಲ್ಲಿ ಬಸ್‌ಗಳು ನಿಲ್ಲಲು ಬಸ್‌ಬೇಗಳನ್ನು ನಿರ್ಮಿಸಲಾಗಿದೆ. ಇತರ ವಾಹನಗಳ ಪಾರ್ಕಿಂಗ್‌ಗೂ ಅಲ್ಪಸ್ವಲ್ಪಜಾಗ ಸಿಕ್ಕಿದೆ. ಇದರ ಜೊತೆಗೆ ಮೆಲ್ಕಾರ್-ಕೊಣಾಜೆ ರಸ್ತೆಯನ್ನು ಕೂಡಾ ಸುಮಾರು 500 ಮೀಟರ್‌ನಷ್ಟು ಚತಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗಿದೆ. ಇಲ್ಲು ಕೂಡಾ ಬಸ್‌ಬೇಗಳನ್ನು ನಿರ್ಮಿಸಲಾಗಿದೆ. ಸುಮಾರು 3 ಕೋ.ರೂ. ವೆಚ್ಚದಲ್ಲಿ ಈ ಅಭಿವೃದ್ಧಿ ಕಾರ್ಯಗಳು ನಡೆದವು. ಇಷ್ಟೆಲ್ಲ ಆದರೂ ಇಲ್ಲಿನ ಸಂಕಷ್ಟ ಕೊನೆಗೊಂಡಿಲ್ಲ. ಇಲ್ಲಿನ ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸ್ ನಿಯೋಜಿಸಿಲ್ಲ. ಮೆಲ್ಕಾರ್‌ನ ಬಿ.ಸಿ.ರೋಡ್-ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ವಿಭಜಕ ನಿರ್ಮಾಣವಾಗಿಲ್ಲ. ಇದರಿಂದ ಇಲ್ಲಿನ ರಸ್ತೆಯಲ್ಲಿ ವಾಹನಗಳು ಅಡ್ಡಾದಿಡ್ಡಿ ಸಂಚರಿಸುವುದರಿಂದ ದಿನನಿತ್ಯ ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ. ಪಾದಚಾರಿಗಳು ರಸ್ತೆ ದಾಟಲು ಪ್ರಾಣವನ್ನು ಕೈಯಲ್ಲಿಟ್ಟು ನಡೆಯಬೇಕಿದೆ. ಇತ್ತೀಚೆಗೆ ಇಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇತರ ಸಣ್ಣ ಪುಟ್ಟ ಅಪಘಾತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

**ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಂಡ ಮೆಲ್ಕಾರ್‌ನಲ್ಲಿ ಪ್ರಸ್ತುತ ಟ್ರಾಫಿಕ್ ವ್ಯವಸ್ಥೆತೀರ ಹದೆಗೆಟ್ಟಿದೆ. ರಸ್ತೆ ವಿಭಜಕ ಇಲ್ಲದಿರುವುದರಿಂದ ವಾಹನಗಳು ಅಡ್ಡಾದಿಡ್ಡಿಸಂಚರಿಸುತ್ತಿವೆ. ರಸ್ತೆ ವಿಶಾಲವಾಗಿರುವು ದರಿಂದ ಪಾದಚಾರಿಗಳಿಗೂ ರಸ್ತೆ ದಾಟಲುಅಸಾಧ್ಯವಾಗಿದೆ. ಆದ್ದರಿಂದ ಮೆಲ್ಕಾರ್ ಜಂಕ್ಷನ್ ಉದ್ದಕ್ಕೂ ರಸ್ತೆ ವಿಭಜಕ

ನಿರ್ಮಿಸ ಬೇಕು. ಜಂಕ್ಷನ್‌ನಿಂದ ಸ್ವಲ್ಪದೂರದಲ್ಲಿ ಯೂಟರ್ನ್‌ಗೆ ವಿಭಜಕವನ್ನು ತೆರೆದುಕೊಡ ಬೇಕು. ಮೆಲ್ಕಾರ್‌ನಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರನ್ನು ನಿಯೋಜಿಸಬೇಕು. ಪ್ರಮುಖವಾಗಿ ಖಾಸಗಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಆಟೊ ನಿಲ್ದಾಣ ಕೂಡಾ ನಿರ್ಮಿಸುವ ಅಗತ್ಯವಿದೆ.

- ಮುಹಮ್ಮದ್ ಶಹೀದ್ ಗುಡ್ಡೆಅಂಗಡಿ, ಸಾಮಾಜಿಕ ಕಾರ್ಯಕರ್ತ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News