​ಆಸ್ಟ್ರೇಲಿಯದಲ್ಲಿ ಭಾರತೀಯ ಮೂಲದ ಪಾದ್ರಿಗೆ ಚೂರಿ ಇರಿತ

Update: 2017-03-20 15:18 GMT

ಮೆಲ್ಬರ್ನ್, ಮಾ. 20: ಆಸ್ಟ್ರೇಲಿಯದ ಮೆಲ್ಬರ್ನ್‌ನಲ್ಲಿ ನಡೆದ ಜನಾಂಗೀಯ ದಾಳಿಯೊಂದರಲ್ಲಿ, ದುಷ್ಕರ್ಮಿಯೊಬ್ಬನು ಭಾರತ ಮೂಲದ ಕೆಥೋಲಿಕ್ ಪಾದ್ರಿಯೊಬ್ಬರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.

ನೀನು ಭಾರತೀಯನಾಗಿರುವುದರಿಂದ ಪ್ರಾರ್ಥನೆ ಹೇಳುವ ಅರ್ಹತೆಯಿಲ್ಲ ಎಂಬುದಾಗಿ ದುಷ್ಕರ್ಮಿಯು ಈ ಸಂದರ್ಭದಲ್ಲಿ ಬೊಬ್ಬೆ ಹಾಕಿದ್ದಾನೆ ಎಂದು ಹೇಳಲಾಗಿದೆ.

ಫಾಕ್ನರ್‌ನಲ್ಲಿರುವ ಸೈಂಟ್ ಮ್ಯಾಥ್ಯೂಸ್ ಪ್ಯಾರಿಶ್‌ನಲ್ಲಿ ರವಿವಾರ ಕೈಯಲ್ಲಿ ಚೂರಿ ಹಿಡಿದ ವ್ಯಕ್ತಿಯೊಬ್ಬ 48 ವರ್ಷದ ಟಾಮಿ ಕಳತೂರ್ ಮ್ಯಾಥ್ಯೂ ಎಂಬವರನ್ನು ಸಮೀಪಿಸಿ ಕುತ್ತಿಗೆಗೆ ಇರಿದನು ಎನ್ನಲಾಗಿದೆ.

‘‘ನೀನು ಭಾರತೀಯನಾಗಿರುವುದರಿಂದ, ಹಿಂದೂ ಆಗಿರಬೇಕು ಅಥವಾ ಮುಸ್ಲಿಮ್ ಆಗಿರಬೇಕು. ಹಾಗಾಗಿ, ಪ್ರಾರ್ಥನೆ ಹೇಳಲು ಅರ್ಹತೆಯಿಲ್ಲ’’ ಎಂದು ದುಷ್ಕರ್ಮಿಯು ಹೇಳಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಘಟನೆಗೆ ಸಂಬಂಧಿಸಿ ಫಾಕ್ನರ್‌ನ 72 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News