ವಸತಿ, ಕಾರ್ಮಿಕ ನಿಯಮ ಉಲ್ಲಂಘನೆ ಸಮಸ್ಯೆ ಎದುರಿಸುವವರಿಗೆ ಸೌದಿ ಸರ್ಕಾರದಿಂದ ಮಹತ್ವದ ಘೋಷಣೆ

Update: 2017-03-20 07:23 GMT

ಜಿದ್ದಾ,ಮಾ.20 : ಇಲ್ಲಿನ ಆಂತರಿಕ ಸಚಿವಾಲಯವು ರವಿವಾರದಂದು ‘‘ಎ ನೇಶನ್ ವಿದೌಟ್ ವಾಯ್ಲೇಶನ್ಸ್’’ (ನಿಯಮಗಳ ಉಲ್ಲಂಘನೆಯಿಲ್ಲದ ದೇಶ) ಎಂಬ ಅಭಿಯಾನ ಆರಂಭಿಸಿದ್ದು ದೇಶದ ವಸತಿ ಮತ್ತು ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮಾಡುವವರಿಗೆ ದಂಡವಿಲ್ಲದೆಯೇ ದೇಶ ಬಿಡಲು 90 ದಿನಗಳ ಕಾಲಾವಕಾಶ ನೀಡಲಾಗಿದೆ.

ಮಾರ್ಚ್ 29ರಿಂದ ಊರ್ಜಿತವಾಗುವ ಈ 90 ದಿನಗಳ ಗ್ರೇಸ್ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ನಿಯಮಗಳ ಉಲ್ಲಂಘಕರಿಗೆ ರಾಜಕುಮಾರ ಮೊಹಮ್ಮದ್ ಬಿನ್ ನೈಫ್, ಉಪ ಪ್ರಧಾನಿ ಹಾಗೂ ಆಂತರಿಕ ಸಚಿವರು ಆಗ್ರಹಿಸಿದ್ದಾರೆ.

ನಿಗದಿತ ಅವಧಿಯೊಳಗಾಗಿ ದೇಶ ಬಿಡಲು ಬಯಸುವವರಿಗೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನೆರವಾಗಿ ಎಲ್ಲಾ ರೀತಿಯ ನಿರ್ಬಂಧಗಳಿಂದ ಅವರನ್ನು ಮುಕ್ತರನ್ನಾಗಿಸಬೇಕೆಂದು ರಾಜಕುಮಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮೇಲೆ ತಿಳಿಸಲಾದ ಹೊಸ ಅಭಿಯಾನವನ್ನು 19 ಸರಕಾರಿ ಏಜನ್ಸಿಗಳು ಕೈಗೊಳ್ಳಲಿವೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಮೇ. ಜ. ಮನ್ಸೂರ್ ಅಲ್-ತುರ್ಕಿ ಹೇಳಿದ್ದಾರೆ. ಹಜ್ ಹಾಗೂ ಉಮ್ರಾಹ್ ಯಾತ್ರೆಗಾಗಿ ಆಗಮಿಸಿ ಅವಧಿ ಮೀರಿ ಇಲ್ಲಿ ವಾಸಿಸುವವರಿಗೆ ಹಾಗೂ ಇನ್ನಿತರ ಯಾವುದೇ ವಿಧದ ವೀಸಾ ಉಲ್ಲಂಘನೆ ಮಾಡಿದವರು ಈ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ.

ಗಡಿಯನ್ನು ಅಕ್ರಮವಾಗಿ ಯಾವುದೇ ವಸತಿ ಯಾ ಉದ್ಯೋಗ ವೀಸಾ ಪಡೆಯದೇ ಪ್ರವೇಶಿಸಿದವರೂ ಈ ಅಭಿಯಾನದಂಗವಾಗಿ ಪ್ರಯೋಜನ ಪಡೆದು ದೇಶ ತೊರೆಯಬಹುದಾಗಿದೆ ಹಾಗೂ ಅವರಿಗೆ ಪ್ರಯಾಣ ಪರವಾನಿಗೆಗಳನ್ನು ನೀಡಲಾಗುವುದು.

ನಿಯಮ ಉಲ್ಲಂಘಕರಿಗೆ ದೇಶ ತ್ಯಜಿಸಲು ಅನುಕೂಲವಾಗುವಂತೆ ಎಲ್ಲಾ ತಯಾರಿಯನ್ನೂ ಪಾಸ್ ಪೋರ್ಟ್ ಇಲಾಖೆಯ ಮಹಾ ನಿರ್ದೇಶನಾಲಯ ಹಾಗೂ ಇಮಿಗ್ರೇಶನ್ ಇಲಾಖೆ ಕೈಗೊಂಡಿದೆ.

ಗುರುತು ಪತ್ರವಿಲ್ಲದ ನಿವಾಸಿಗಳು ಹಾಗೂ ಹಜ್ ವೀಸಾ ಅವಧಿ ಮುಗಿದ ನಂತರವೂ ದೇಶದಲ್ಲಿ ವಾಸಿಸುತ್ತಿರುವವರು ತಮ್ಮ ಹತ್ತಿರದ ಪಾಸ್ ಪೋರ್ಟ್ ಇಲಾಖೆ ಕಚೇರಿಗೆ ಭೇಟಿ ನೀಡುವಂತೆಯೂ ಅಲ್-ತುಕ್ರಿ ಸಲಹೆ ನೀಡಿದ್ದಾರೆ. ಉದ್ಯೋಗ ಯಾ ವಸತಿ ವೀಸಾ ಇಲ್ಲದವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳದಂತೆಯೂ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಅವರು ಸಲಹೆ ನೀಡಿದ್ದಾರಲ್ಲದೆ ಈ ಆದೇಶ ಪಾಲಿಸದವರ ಬಗ್ಗೆ ಮಾಹಿತಿಯನ್ನು 999 ಸಂಖ್ಯೆಗೆ ಕರೆ ಮಾಡಿ ತಿಳಿಸುವಂತೆಯೂ ಹೇಳಿದ್ದಾರೆ.

ಗ್ರೇಸ್ ಅವಧಿ ಮುಗಿದ ನಂತರ ನಿಯಮ ಉಲ್ಲಂಘಕರಿಗೆ ದಂಢ ವಿಧಿಸಲಾಗುವುದು. ಇಂತಹುದೇ ಒಂದು ಅಭಿಯಾನ ಮೂರು ವರ್ಷಗಳ ಹಿಂದೆ ಆರಂಭವಾದಾಗ 2.5 ಮಿಲಿಯನ್ ನಿಯಮ ಉಲ್ಲಂಘಕರು ದೇಶ ತೊರೆದಿದ್ದರು.

ಅವರ ಇಲಾಖೆ ಈಗಾಗಲೇ ಜಲ ಹಾಗೂ ರಸ್ತೆ ಮಾರ್ಗವಾಗಿ ದೇಶವನ್ನು ಅಕ್ರಮವಾಗಿ ಪ್ರವೇಶಿಸಲೆತ್ನಿಸಿದ ಸಾವಿರಾರು ಮಂದಿಯನ್ನು ಹಿಂದಿರುಗುವಂತೆ ಮಾಡಿದೆ ಎಂದು ಗಡಿ ರಕ್ಷಣಾ ಪಡೆಯ ವಕ್ತಾರ ಕರ್ನಲ್ ಸಹರ್ ಅಲ್-ಹರ್ಬಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News