×
Ad

ವೆನ್‌ಲಾಕ್ ಆಸ್ಪತ್ರೆಯಲ್ಲಿ ‘ನೇತ್ರ ಬ್ಯಾಂಕ್’ ಸ್ಥಾಪನೆ: ಡಾ.ಎಂ.ಆರ್. ರವಿ

Update: 2017-03-20 14:04 IST

ಮಂಗಳೂರು, ಮಾ.20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ‘ನೇತ್ರಬ್ಯಾಂಕ್’ ತೆರೆಯಲು ಸರಕಾರಕ್ಕೆ ಜಿಲ್ಲಾ ಪಂಚಾಯತ್ ವತಿಯಿಂದ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ವಿಭಾಗದ ವತಿಯಿಂದ ಜಿಲ್ಲಾ ಪಂಚಾಯತ್‌ನ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೇತ್ರದಾನ ಮತ್ತು ಕಣ್ಣಿನ ಅರಿವು ಕಾರ್ಯಕ್ರಮದ ಅಧ್ಯ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 150 ವರ್ಷಗಳಿಗೂ ಅಧಿಕ ಹಳೆಯದಾದ ಸರಕಾರಿ ಆಸ್ಪತ್ರೆಯಿದ್ದರೂ ಅಲ್ಲಿ ಈವರೆಗೂ ನೇತ್ರ ಬ್ಯಾಂಕ್ ಇಲ್ಲದಿರುವುದು ಖೇದಕರ ಸಂಗತಿ. ಹಾಗಾಗಿ ಜಿಲ್ಲಾಸ್ಪತ್ರೆಯಲ್ಲಿ ಸರಕಾರದ ನೆರವಿನಲ್ಲಿ ನೇತ್ರಬ್ಯಾಂಕ್ ತೆರೆದು ಈ ವರ್ಷದಲ್ಲಿ 10,000 ನೇತ್ರದಾನಿಗಳನ್ನು ನೋಂದಣಿ ಮಾಡುವ ಗುರಿಯನ್ನು ಜಿಲ್ಲಾ ಪಂಚಾಯತ್ ಹೊಂದಿದೆ ಎಂದು ಅವರು ಹೇಳಿದರು.

ನಮ್ಮ ಮರಣದ ಬಳಿಕ ಮಣ್ಣು ಪಾಲಾಗುವ ನೇತ್ರಗಳು ಸೇರಿದಂತೆ ದೇಹದ ಇತರ ಅಗತ್ಯ ಅಂಗಾಂಗಗಳನ್ನು ಇನ್ನೊಬ್ಬರಿಗೆ ಮರುಜೀವ ನೀಡಲು ದಾನ ಮಾಡುವುದು ಪುಣ್ಯದ ಕೆಲಸ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಅದಕ್ಕಾಗಿ ಶಾಲಾ ಕಾಲೇಜುಳಲ್ಲಿ ಎಲ್ಲಾ ಇಲಾಖೆಗಳಲ್ಲೂ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ನೇತ್ರದಾನ ಸೇರಿದಂತೆ ಅಂಗಾಂಗ ದಾನಗಳ ಮೂಲಕ ಸರಕಾರಿ ನೌಕರರು ತಮ್ಮ ಜೀವನಕ್ಕೆ ಮಹತ್ವವನ್ನು ನೀಡಬಹುದು ಎಂದು ಸಲಹೆ ನೀಡಿದ ಅವರು, ನಮ್ಮ ಕೆಲಸದಲ್ಲಿ ಸಮಯವನ್ನು ಸಮರ್ಪಕವಾಗಿ ಹೊಂದಿಸಿಕೊಳ್ಳಲು ಸಮರ್ಥರಾದಾಗ ಒತ್ತಡದ ಜೀವನದಿಂದ ಪಾರಾಗಲು ಸಾಧ್ಯವಾಗುತ್ತದೆ ಎಂದರು.

ನಾವು ಮಾಡುವ ಕೆಲಸಗಳನ್ನು ಆದ್ಯತೆಯ ನೆಲೆಯಲ್ಲಿ ನಿರ್ವಹಿಸಿದಾಗ ಯಾವುದೇ ರೀತಿಯ ಒತ್ತಡಗಳಿಲ್ಲದೆ ಕಾರ್ಯ ನಿರ್ವಹಿಸುವ ಜತೆಗೆ ಆರೋಗ್ಯಭರಿತ ಜೀವನ ಸಾಗಿಸಲು ಸಾಧ್ಯ ಎಂದು ಸರಕಾರಿ ಅಧಿಕಾರಿಗಳಿಗೆ ಅವರು ಈ ಸಂದರ್ಭ ಕಿವಿಮಾತನ್ನೂ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನೇತ್ರದಾನ ಮಹತ್ವವಾದ ದಾನ ಎಂದರು.

ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ಮಾನಸಿಕ ತಜ್ಞ ಜಯಂತ್, ಡಾ. ಶ್ರೀನಿವಾಸ್ ಭಟ್ ಉಪಸ್ಥಿತರಿದ್ದು. ಡಾ. ರತ್ನಾಕರ್ ಸ್ವಾಗತಿಸಿದರು.

25ನೆ ವಿವಾಹ ವಾರ್ಷಿಕೋತ್ಸವಕ್ಕೆ ಸಿಇಒ ದಂಪತಿಯಿಂದ ನೇತ್ರದಾನ:

ತಮ್ಮ ವಿವಾಹದ 25ನೆ ವರ್ಷದ ವಾರ್ಷಿಕೋತ್ಸವದ ಸಂಭ್ರಮವನ್ನು ತಮ್ಮ ಪತ್ನಿಯ ಸಮ್ಮತಿಯ ಮೇರೆಗೆ ನೇತ್ರದಾನಕ್ಕೆ ಮುಂದಾಗುವ ಮೂಲಕ ವಿಶಿಷ್ಠವಾಗಿ ಆಚರಿಸಿಕೊಂಡಿದ್ದಾಗಿ ಸಿಇಒ ಡಾ. ಎಂ.ಆರ್. ರವಿ ಕಾರ್ಯಕ್ರಮದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News