×
Ad

ಗ್ರಾಪಂ ನೌಕರರ ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹ: ಪಿಡಿಓ, ವಿಎ, ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ

Update: 2017-03-20 18:25 IST

ಉಡುಪಿ, ಮಾ.20: ಗ್ರಾಪಂ ಹಂತದಲ್ಲಿನ ಅವೈಜ್ಞಾನಿಕ ಒತ್ತಡ, ನೌಕರರ ಭಡ್ತಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘ, ಕಾರ್ಯದರ್ಶಿಯವರ ಸಂಘ, ದ್ವಿತೀಯ ದರ್ಜೆ ಲೆಕ್ಕಸಹಾಯಕರ ಸಂಘ ಮತ್ತು ಪಂಚಾಯತ್ ನೌಕರರ ಸಂಘವು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿದೆ.

ಧರಣಿಯನ್ನುದ್ದೇಶಿಸಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಸಿದ್ದೇಶ್, ಗ್ರಾಪಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಪೂಜಿ ಸೇವಾ ಕೇಂದ್ರಗಳಿಗೆ ಮಾನವ ಸಂಪನ್ಮೂಲ ಹಾಗೂ ತಾಂತ್ರಿಕ ಪರಿಕರಗಳನ್ನು ಕಾಲಮಿತಿಯೊಳಗೆ ಒದಗಿಸಬೇಕು. ಕಾರ್ಯದರ್ಶಿ, ಲೆಕ್ಕ ಸಹಾಯಕರ ಭಡ್ತಿಗೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಪಂಚಾಯತ್ ಸಿಬ್ಬಂದಿಗಳ ಭಡ್ತಿ ಪ್ರಕ್ರಿಯೆಯನ್ನು ಅತಿ ಶೀಘ್ರವಾಗಿ ಮಾಡಬೇಕು. ಸಿಬ್ಬಂದಿಗಳಿಗೆ ಪಿಎಫ್ ಮತ್ತು ಇಎಸ್‌ಐ ಮತ್ತಿತ್ತರ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿವಿಧ ಯೋಜನೆಗಳ ಅನುಷ್ಠಾನ, ವಸತಿ ಯೋಜನೆಯ ಅವೈಜ್ಞಾನಿಕ ಅನುಷ್ಠಾನ, ನೋಟೀಸ್ ನೀಡಿಕೆೆ, ಇಲಾಖೆ ವಿಚಾರಣೆಯನ್ನು ನಿಲ್ಲಿಸಬೇಕು. ಇಲಾಖಾ ವಿಚಾರಣೆಯನ್ನು ಹಿಂದಕ್ಕೆ ಪಡೆಯಬೇಕು. ಗ್ರಾಪಂ ನೌಕರರ ವಿರುದ್ಧ ಇರುವ ಪ್ರಕರಣಗಳನ್ನು ಇಲಾಖಾ ತನಿಖೆ ನಡೆಸದೆ ಲೋಕಾಯುಕ್ತಕ್ಕೆ ವಹಿಸುವುದನ್ನು ತಕ್ಷಣೆ ನಿಲ್ಲಿಸಬೇಕು. ಕಂಪ್ಯೂಟರ್ ನಿರ್ವಾಹಕರ ಹುದ್ದೆಯನ್ನು ಸೃಜಿಸಿ ಅನುಮೋದನೆ ನೀಡಬೇಕು. ಗ್ರಾಪಂ ಎಲ್ಲ ನೌಕರರನ್ನು ಸರಕಾರಿ ನೌಕರರನ್ನಾಗಿಸಲು ಕ್ರಮ ತೆಗೆದುಕೊಳ್ಳಬೇಕು. ನೌಕರರ ವೇತನ ಭತ್ಯೆ ಮತ್ತು ಇತರ ಸೌಲಭ್ಯಗಳನ್ನು ಸಕಾಲ ಯೋಜನೆಯಡಿ ನಿಗದಿತ ಕಾಲಾವಧಿಯಲ್ಲಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಮಹೇಶ್, ಉಪಾಧ್ಯಕ್ಷೆ ಪ್ರಮೀಳಾ ನಾಯಕ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಂಘದ ಅಧ್ಯಕ್ಷ ಶಿವರಾಜ್, ಕಾರ್ಯದರ್ಶಿ ಬೆಟ್ಟ ಸ್ವಾಮಿ, ಪಂಚಾಯತ್ ನೌಕರರ ಸಂಘದ ಅಧ್ಯಕ್ಷ ನಾರಾಯಣ, ಕಾರ್ಯ ದರ್ಶಿ ರಮೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News