ಮೇ 25ರವರೆಗೆ ಪೂರೈಕೆಗಾಗುವಷ್ಟು ನೀರು ಲಭ್ಯ: ಮೇಯರ್ ಕವಿತಾ ಸನಿಲ್
ಮಂಗಳೂರು, ಮಾ.20: ನಗರ ವ್ಯಾಪ್ತಿಯಲ್ಲಿ ಇಂದಿನಿಂದ ನೀರು ಪೂರೈಕೆಯಲ್ಲಿ ಕಡಿತವನ್ನು ಮಾಡಲಾಗಿದ್ದು, ಇದೇ ರೀತಿಯಲ್ಲಿ ಮುಂದುವರಿಸಿದರೆ ಶಂಭೂರಿನ ಎಎಂಆರ್ ಹಾಗೂ ತುಂಬೆ ಅಣೆಕಟ್ಟಿನಲ್ಲಿ ಲಭ್ಯವಿರುವ ನೀರು ಮೇ 25ರವರೆಗೆ ಪೂರೈಕೆಗೆ ನಗರದ ಜನತೆಗೆ ಪೂರೈಸಬಹುದಾಗಿದೆ ಎಂದು ಮೇಯರ್ ಕವಿತಾ ಸನಿಲ್ 'ವಾರ್ತಾಭಾರತಿ' ಗೆ ತಿಳಿಸಿದ್ದಾರೆ.
ಶಂಭೂರಿನ ಎಎಂಆರ್ ಅಣೆಕಟ್ಟಿನಿಂದ ತುಂಬೆ ಅಣೆಕಟ್ಟಿಗೆ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ನೀರಿನ ಮಟ್ಟ ತುಂಬೆ ಅಣೆಕಟ್ಟಿನಲ್ಲಿ 5 ಮೀಟರ್‌ಗೆ ಏರಿಕೆಯಾಗಿದೆ. ಹಾಗಿದ್ದರೂ ನಗರದ ಯಾವುದೇ ಭಾಗದಲ್ಲಿ ಉಂಟಾಗುವ ನೀರಿನ ಸಮಸ್ಯೆಯನ್ನು ಎದುರಿಸಲು ಮಹಾನಗರ ಪಾಲಿಕೆ ಆಡಳಿತ ಸಿದ್ಧತೆ ನಡೆಸಿದೆ. ಜನರು ಯಾವುದೇ ರೀತಿಯಲ್ಲಿ ಆತಂಕ ಪಡಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.
ನೀರಿನ ಮಿತ ಬಳಕೆಗೆ ಮನವಿ
ಸಾರ್ವಜನಿಕರು ಕುಡಿಯುವ ನೀರನ್ನು ಯಾವುದೇ ರೀತಿಯಲ್ಲಿ ಪೋಲಾಗದಂತೆ ಜಾಗರೂಕತೆ ವಹಿಸಬೇಕು. ನಗರದ ಜನತೆ ಕಳೆದ ವರ್ಷ ಅನುಭವಿಸಿದ ನೀರಿನ ಬವಣೆಯನ್ನು ಈ ವರ್ಷ ಭರಿಸಲಾರರು ಎಂಬ ಪೂರ್ಣ ವಿಶ್ವಾಸ ತನಗಿದೆಯಾದರೂ, ಸದ್ಯ ಲಭ್ಯವಿರುವ ನೀರನ್ನು ಎಚ್ಚರಿಕೆಯಿಂದ ಉಪಯೋಗಿಸುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಮನವಿ ಮಾಡಿದ್ದಾರೆ.
ಕೈಗಾರಿಕೆಗಳಿಗೆ ಸಂಪೂರ್ಣ ಸ್ಥಗಿತಕ್ಕೆ ಜಿಲ್ಲಾಧಿಕಾರಿಗೆ ಪತ್ರ:
ಕೈಗಾರಿಕೆಗಳಿಗೆ ಪ್ರಸ್ತುತ ನೀರು ಪೂರೈಕೆಯಲ್ಲಿ ಕಡಿತ ಮಾಡಿ ಜಿಲ್ಲಾಧಿಕಾರಿ ಆದೇಶಿದ್ದು, ಆ ಪ್ರಕಾರವೇ ನೀರು ಪೂರೈಕೆಯಾಗುತ್ತಿದೆ. ಆದರೆ, ನಗರದ ಜನತೆಗೆ ಕುಡಿಯುವ ನೀರಿಗೆ ಪ್ರಮುಖ ಆದ್ಯತೆ ನೀಡುವ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ನೀರು ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಇಂದು ಪತ್ರವನ್ನು ಬರೆದಿದ್ದೇನೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.