ಐ ಫೋನ್ ಚಾರ್ಜ್ ಆಗುತ್ತಿದ್ದಾಗ ನೀರಿಗೆ: ವಿದ್ಯುದಾಘಾತದಿಂದ ವ್ಯಕ್ತಿ ಸಾವು

Update: 2017-03-20 14:43 GMT

ಲಂಡನ್, ಮಾ. 20: ಐ ಫೋನ್ ಚಾರ್ಜ್ ಆಗುತ್ತಿದ್ದ ವೇಳೆ ನೀರಿಗೆ ಬಿದ್ದಾಗ ಸ್ನಾನಗೃಹದಲ್ಲಿದ್ದ ವ್ಯಕ್ತಿಯೊಬ್ಬರು ವಿದ್ಯುದಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವುದು ನ್ಯಾಯಾಂಗ ತನಿಖೆಯಿಂದ ತಿಳಿದುಬಂದಿದೆ.ಕಳೆದ ವರ್ಷದ ಡಿಸೆಂಬರ್ 11ರಂದು ಅವರ ಮೃತದೇಹ ಅವರ ಸ್ನಾನದ ಕೋಣೆಯಲ್ಲಿ ಪತ್ತೆಯಾಗಿತ್ತು.

32 ವರ್ಷದ ರಿಚರ್ಡ್ ಬುಲ್ ಪಶ್ಚಿಮ ಲಂಡನ್‌ನಲ್ಲಿನ ಈಲಿಂಗ್‌ನಲ್ಲಿರುವ ತನ್ನ ಮನೆಯಲ್ಲಿ ಸ್ನಾನ ಮಾಡುವಾಗ ಫೋನನ್ನು ಚಾರ್ಜ್‌ಗೆ ಇಟ್ಟಿದ್ದರು. ಚಾರ್ಜ್ ಆಗುತ್ತಿರುವಾಗ ಫೋನ್ ಅವರ ಎದೆಯ ಮೇಲಿತ್ತು. ಫೋನ್ ಆಕಸ್ಮಿಕವಾಗಿ ನೀರಿಗೆ ಬಿದ್ದಾಗ ಅವರಿಗೆ ತೀವ್ರ ಸುಟ್ಟ ಗಾಯಗಳಾದವು ಎಂದು ‘ದ ಸನ್’ ವರದಿ ಮಾಡಿದೆ.

ಈ ವ್ಯಕ್ತಿಯ ಸಾವು ಆಕಸ್ಮಿಕ ಎಂದು ಸಂಶಯಾಸ್ಪದ ಸಾವುಗಳ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿ ಹೊಂದಿರುವ ಕೊರೋನರ್ ಗುರುವಾರ ಘೋಷಿಸಿದ್ದಾರೆ.

ಬುಲ್ ಚಾರ್ಜರನ್ನು ಎಕ್ಸ್‌ಟೆನ್ಶನ್ ಕೋರ್ಡ್‌ಗೆ ಸಿಕ್ಕಿಸಿ ಅದನ್ನು ತನ್ನ ಎದೆಯ ಮೇಲಿಟ್ಟು ಫೋನನ್ನು ಬಳಸುತ್ತಿದ್ದರು ಎಂದು ಭಾವಿಸಲಾಗಿದೆ.ಹೆಂಡತಿ ತಾನ್ಯ ಮನೆಗೆ ಹಿಂದಿರುಗಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು.

‘‘ಇವುಗಳು ನಿರಪಯಕಾರಿ ಸಾಧನಗಳೆಂಬಂತೆ ಕಾಣುತ್ತವೆ, ಆದರೆ ಸ್ನಾನದ ಕೋಣೆಯಲ್ಲಿ ಇವುಗಳು ಹೇರ್‌ಡ್ರಯರ್‌ನಷ್ಟೇ ಅಪಾಯಕಾರಿಯಾಗಬಲ್ಲದು. ಕಂಪೆನಿ ಈ ಬಗ್ಗೆ ಎಚ್ಚರಿಕೆಗಳನ್ನು ನೀಡಬೇಕು. ಫೋನ್ ತಯಾರಿಕಾ ಕಂಪೆನಿಗೆ ನಾನು ಈ ಬಗ್ಗೆ ಪತ್ರ ಬರೆಯಲಿದ್ದೇನೆ’’ ಎಂದು ಪಶ್ಚಿಮ ಲಂಡನ್‌ನ ಕೊರೋನರ್ ನ್ಯಾಯಾಲಯದಲ್ಲಿ ಬುಧವಾರ ವಿಚಾರಣೆ ನಡೆಸಿದ ಡಾ. ಸಿಯಾನ್ ಕಮಿಂಗ್ಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News