ಕಂಬಳಬೆಟ್ಟುವಿನಲ್ಲಿ ಸುಡುಮದ್ದು ತಯಾರಿ ವೇಳೆ ಸ್ಫೋಟ; ಇಬ್ಬರ ಸಾವು

Update: 2017-03-20 15:29 GMT

ಬಂಟ್ವಾಳ, ಮಾ. 20: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸೋಮವಾರ ಸಂಜೆ ಆಕಸ್ಮಿಕವಾಗಿ ಸಂಭವಿಸಿದ ತೀವ್ರ ಸ್ವರೂಪದ ಸ್ಫೋಟದಲ್ಲಿ ಇಬ್ಬರು ದಾರುಣವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕಂಬಳಬೆಟ್ಟುವಿನ ನೂಜಿ ಎಂಬಲ್ಲಿ ನಡೆದಿದೆ.

ಕಂಬಳಬೆಟ್ಟು ಶಾಂತಿನಗರ ನಿವಾಸಿ ಉಮರ್ ಎಂಬವರ ಪುತ್ರ ಹಾಶಿಮ್(25) ಮತ್ತು ಕಂಬಳಬೆಟ್ಟು ನೂಜಿ ನಿವಾಸಿ ಜಾರು ಪೂಜಾರಿ ಎಂಬವರ ಪುತ್ರ ಸುಂದರ ಪೂಜಾರಿ(39) ಘಟನೆಯಿಂದ ಮೃತಪಟ್ಟ ದುರ್ದೈವಿಗಳು.

ದಿ. ಗರ್ನಲ್ ಸಾಹೀಬ್ ಎಂದೇ ಚಿರಪರಿಚಿತರಾದ ಅವರ ಸಿಡಿಮದ್ದು ತಯಾರಿಕಾ ಘಟಕದಲ್ಲಿ ಈ ಸ್ಫೋಟ ಸಂಭವಿಸಿದ್ದು, ಗರ್ನಲ್ ಸಾಹೀಬ್‌ರವರ ಮರಣದ ಬಳಿಕ ಈ ಘಟಕವನ್ನು ಅವರ ಮಕ್ಕಳಾದ ಗಫೂರ್ ಮತ್ತು ರಫೀಕ್ ಎಂಬವರು ನಡೆಸುತ್ತಿದ್ದರು. ಸಿಡಿಮದ್ದು ತಯಾರಿಕೆಗೆ ಪರಿಕರಗಳನ್ನು ಅರಿಯುತ್ತಿದ್ದ ವೇಳೆ ಈ ಭೀಕರ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಈ ಘಟಕದಲ್ಲಿ ಒಟ್ಟು ಆರು ಮಂದಿ ಕೆಲಸ ನಿರ್ವಹಿಸುತ್ತಿದ್ದು ಸ್ಫೋಟಕ್ಕೆ ಕೆಲವೇ ನಿಮಿಷಕ್ಕೆ ಮೊದಲು 5 ಮಂದಿ ಕೆಲಸ ಮುಗಿಸಿ ಘಟಕದಿಂದ ಮನೆಗೆ ತೆರಳಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸ್ಫೋಟದ ತೀವ್ರತೆಗೆ ಒಂದು ಮೃತದೇಹ ಘಟಕದ ಮಾಡಿನ ಮೇಲೆ ಎಸೆಯಲ್ಪಟ್ಟರೆ ಇನ್ನೊಂದು ಮೃತದೇಹ ಘಟಕದಿಂದ ಸುಮಾರು 25 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೃತ ಸುಂದರ ಪೂಜಾರಿ ಘಟಕದ ಕೆಲಸದಾಳು ಆಗಿದ್ದರೆ ಮೃತ ಹಾಶೀಮ್ ಘಟಕದ ಮಾಲಕ ರಫೀಕ್‌ರ ಭಾಮೈದ ಎನ್ನಲಾಗಿದ್ದು ಇಂದು ರಾತ್ರಿ ಬೆಂಗಳೂರಿಗೆ ತೆರಬೇಕಾದ ಹಾಶೀಮ್ ಸ್ಫೋಟಕ್ಕೆ ಕೆಲವೇ ನಿಮಿಷಕ್ಕೆ ಮೊದಲು ಬಂದಿದ್ದ ಎಂದು ತಿಳಿದು ಬಂದಿದೆ.

ಸ್ಫೋಟದ ತೀವ್ರತೆಗೆ ಎರಡೂ ಮೃತದೇಹಗಳ ಅಂಗಾಗ ಛಿದ್ರಗೊಂಡಿದೆ. ಘಟಕದ ಹಂಚುಗಳು ಕೂಡಾ ಹಾರಿ ಹೋಗಿದೆ. ಅಲ್ಲದೆ ಪಕ್ಕದ ಮನೆಯ ವಿನೋದ್ ಪೂಜಾರಿ ಎಂಬವರ ಸಹೋದರಿ ಮತ್ತು ಘಟಕದ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟಕದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಮನೆಯ ಕಿಟಿಕಿಗಳ ಗಾಜು ಪುಡಿಯಾಗಿದ್ದಲ್ಲದೆ ಗೋಡೆಗಳು ಬಿರುಕುಬಿಟ್ಟಿದೆ. ಸ್ಫೋಟದ ಸದ್ದಿಗೆ ಭಯಭೀತರಾದ ಪರಿಸರದ ನಾಗರಿಕರು ಕಕ್ಕಾಬಿಕ್ಕಿಯಾಗಿ ದೂರ ಓಡಲಾರಂಭಿಸಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಮಂದಿ ಕುತೂಹಲಿಗರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಜನರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ ಪಟ್ಟರು.

ಇಲ್ಲಿ ಸುಮಾರು 42 ವರ್ಷಗಳಿಂದ ಈ ಸಿಡಿಮದ್ದು ತಯಾರಿಕಾ ಘಟಕ ಕಾರ್ಯಾಚರಿಸುತ್ತಿತ್ತು. ಅವಿಭಜಿತ ದ.ಕ. ಜಿಲ್ಲೆ ಸಹಿತ ಕೇರಳದ ವಿವಿಧ ದೇವಸ್ಥಾನಗಳಲ್ಲಿ ನಡೆಯುವ ಜಾತ್ರಾಮಹೋತ್ಸವ, ದೈವಸ್ಥಾನಕ್ಕೆ ಸೇರಿದಂತೆ ವಿವಿಧ ಸಮಾರಂಭಗಳಿಗೂ ಇಲ್ಲಿಂದಲೇ ಸಿಡಿಮದ್ದನ್ನು ಪೂರೈಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿದ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್., ಸಿಐ ಬಿ.ಕೆ.ಮಂಜಯ್ಯ, ವಿಟ್ಲ ಠಾಣಾಧಿಕಾರಿ ನಾಗರಾಜ್ ಹಾಗೂ ಅವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News