×
Ad

ಝಾಕಿರ್ ನಾಯ್ಕ್ ಗೆ ಹೊಸ ಸಮನ್ಸ್ ಜಾರಿ

Update: 2017-03-20 19:45 IST

ಹೊಸದಿಲ್ಲಿ, ಮಾ.20: ವಿವಾದಾಸ್ಪದ ಇಸ್ಲಾಮಿಕ್ ಧರ್ಮಬೋಧಕ ಝಾಕಿರ್ ನಾಯ್ಕ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೊಸ ಸಮನ್ಸ್ ಜಾರಿಗೊಳಿಸಿದ್ದು ಮಾ.30ರಂದು ಹೊಸದಿಲ್ಲಿಯಲ್ಲಿರುವ ಕೇಂದ್ರ ಕಚೇರಿಯೆದುರು ಹಾಜರಾಗುವಂತೆ ಸೂಚಿಸಿದೆ.

   ಬಾಂಗ್ಲಾದೇಶದ ಢಾಕಾದ ಕೆಫೆಯೊಂದರ ಮೇಲೆ ಕಳೆದ ವರ್ಷ ಭಯೋತ್ಪಾದಕರು ನಡೆಸಿದ ದಾಳಿಗೆ ಸಂಬಂಧಿಸಿ, ಈ ಉಗ್ರರಲ್ಲಿ ಹಲವರು ಝಾಕಿರ್ ನಾಯ್ಕ್ ಬೋಧನೆಯಿಂದ ಪ್ರಭಾವಿತರಾಗಿ ಈ ಕಾರ್ಯ ನಡೆಸಿದ್ದರು ಎಂಬ ವರದಿಯ ಹಿನ್ನೆಲೆಯಲ್ಲಿ, ಉಗ್ರವಾದ ವಿರೋಧಿ ಕಾನೂನಿನಡಿ ನಾಯ್ಕ್ಗೆ ಮಾ.14ರಂದು ಹಾಜರಾಗುವಂತೆ ಮೊದಲ ಸಮನ್ಸ್ ಜಾರಿಗೊಳಿಸಲಾಗಿತ್ತು. ಎನ್‌ಐಎ ಕಳೆದ ನವೆಂಬರ್‌ನಲ್ಲಿ ಝಾಕಿರ್ ನಾಯ್ಕ್ ಮತ್ತವರ ಸಹಚರರ ವಿರುದ್ದ ಎಫ್‌ಐಆರ್ ದಾಖಲಿಸಿತ್ತು.

 ಮುಂಬೈಯಲ್ಲಿರುವ ಝಾಕಿರ್ ನಿವಾಸಕ್ಕೆ ನೋಟಿಸ್ ಕಳುಹಿಸಲಾಗಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಝಾಕಿರ್ ಇದೀಗ ಸೌದಿ ಅರೆಬಿಯಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಝಾಕಿರ್ ನಾಯ್ಕ್ ಸಮಾಜದಲ್ಲಿ ವಿವಿಧ ಗುಂಪುಗಳ ಮಧ್ಯೆ ದ್ವೇಷ ಭಾವನೆ ಹೆಚ್ಚಿಸುವ ಮತ್ತು ಕಾನೂನುಬಾಹಿರ ಹಾಗೂ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಳ್ಳಲು ಮುಸ್ಲಿಂ ಯುವಕರನ್ನು ಪ್ರೇರೇಪಿಸುತ್ತಿರುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

 ಝಾಕಿರ್ ನಾಯ್ಕ್ ಸ್ಥಾಪಿಸಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಕಾನೂನುಬಾಹಿರ ಸಂಸ್ಥೆಯೆಂದು ಕೇಂದ್ರ ಸರಕಾರ ಘೋಷಿಸಿ ಇದರ ಮೇಲೆ ನಿಷೇಧ ಹೇರಿತ್ತು. ಇದನ್ನು ದಿಲ್ಲಿ ಹೈಕೋರ್ಟ್ ಎತ್ತಿಹಿಡಿದಿತ್ತು. ಝಾಕಿರ್ ನಾಯ್ಕ್ ಧರ್ಮಬೋಧನೆಯನ್ನು ಬ್ರಿಟನ್, ಕೆನಡಾ, ಮಲೇಶ್ಯಾದಲ್ಲಿ ನಿಷೇಧಿಸಲಾಗಿದೆ. 

     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News