ಮಾ.22ರಂದು ನುಸ್ರತುಲ್ ಮಸಾಕೀನ್‌ನಿಂದ ಸಾಮೂಹಿಕ ವಿವಾಹ
ಉಳ್ಳಾಲ, ಮಾ.20: ಉಳ್ಳಾಲ ಅಳೇಕಲದ ಸಾಮಾಜಿಕ ಸಂಘಟನೆಯಾದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ 5ನೆ ವರ್ಷದ 7 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾ.22ರಂದು ಕಲ್ಲಾಪುವಿನಲ್ಲಿರುವ ಖಾಸಗಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಕೆ.ಎಂ.ಕೆ.ಮಂಜನಾಡಿ ತಿಳಿಸಿದರು.
ಕಳೆದ 4 ವರ್ಷಗಳಲ್ಲಿ ಸಂಘಟನೆಯಡಿ 40 ಜೋಡಿ ಬಡ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಲಾಗಿದ್ದು, ಸುಖಮಯ ಜೀವನ ನಡೆಸುತ್ತಿದ್ದಾರೆ. ಈ ವರ್ಷ ಹತ್ತು ಹೆಣ್ಣು ಮಕ್ಕಳ ವಿವಾಹಕ್ಕೆ ನಿರ್ಧರಿಸಲಾಗಿದ್ದರಿಂದ ಹಲವಾರು ಅರ್ಜಿಗಳು ಬಂದಿದ್ದವು. ಸಮಿತಿಯ ಪದಾಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭ ಏಳು ಮಂದಿ ಅರ್ಹರು ಲಭಿಸಿದ್ದಾರೆ. ಉಳಿದ ಮೂರು ಜೋಡಿ ವಿವಾಹ ರಮಝಾನ್ ಬಳಿಕ ಅವರವರ ಮನೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಈ ಸಂಘಟನೆ ಈಗಾಗಲೇ ಬಡ ರೋಗಿಗಳಿಗೆ ಸಹಾಯ, ಶಿಕ್ಷಣ, ಗೃಹ ನಿರ್ಮಾಣಕ್ಕೆ ಸಹಾಯ ಸಹಕಾರ ನೀಡುತ್ತಾ ಬಂದಿದೆ. ಸೇವೆಯ ಒಂದು ಭಾಗವಾಗಿ ಸಾಮೂಹಿಕ ಮದುವೆ ನಡೆಸಲಾಗುತ್ತಿದ್ದು, ಈ ಕಾರ್ಯಕ್ಕೆ ಮಾತ್ರವೇ ಆಯ್ದ ದಾನಿಗಳಿಂದ ನೆರವು ಯಾಚಿಸಲಾಗುತ್ತಿದೆ. ಮುಂದಿನ ವರ್ಷ ಆಯಾ ಮನೆಗಳಲ್ಲೇ ಮದುವೆ ಮಾಡಿಸುವ ಯೋಜನೆಯನ್ನೂ ಟ್ರಸ್ಟ್ ಹಮ್ಮಿಕೊಂಡಿದೆ ಎಂದು ಕೆಎಂಕೆ ಮಂಜನಾಡಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದು, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಶಮೀಮ್ ಸಖಾಫಿ ದುಆ ಮಾಡಲಿದ್ದಾರೆ. ಸೈಯದ್ ಯಹ್ಯಾ ತಂಙಳ್, ಯೂಸುಫ್ ಮಿಸ್ಬಾಹಿ, ಸಚಿವರಾದ ಬಿ. ರಮಾನಾಥ ರೈ, ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ಶಾಸಕ ಮೊಯ್ದಿನ್ ಬಾವ, ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಎಂ.ಎ.ಗಫೂರ್, ರೆ.ಫಾ.ಜೋನ್ ಬ್ಯಾಪ್ಟಿಸ್ಟ್ ಸಲ್ದಾನ, ಚಂದ್ರಹಾಸ ಉಳ್ಳಾಲ್, ಇಬ್ರಾಹೀಂ ಕೋಡಿಜಾಲ್ ಮತ್ತಿತರ ಸಾಮಾಜಿಕ, ಧಾರ್ಮಿಕ, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದರು.
ಟ್ರಸ್ಟ್ ಉಪಾಧ್ಯಕ್ಷ ಯು.ಎಸ್.ಹನೀಫ್, ಪ್ರಧಾನ ಕಾರ್ಯದರ್ಶಿ ಕೆ.ಎನ್.ಮುಹಮ್ಮದ್, ಕೋಶಾಧಿಕಾರಿ ಯು.ಎಂ.ಜಬ್ಬಾರ್ ಹಾಗೂ ಟ್ರಸ್ಟಿ ಯು.ಎಚ್.ಸಿದ್ದೀಕ್ ಉಪಸ್ಥಿತರಿದ್ದರು.