×
Ad

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮಾಝ್‌ಗೆ ವ್ಯವಸ್ಥೆ

Update: 2017-03-20 19:58 IST

ಮಂಗಳೂರು, ಮಾ.20: ಮಂಗಳೂರು ವಿಮಾನ ನಿಲ್ದಾಣದ ಮೂಲಕ ಸಾಕಷ್ಟು ಸಂಖ್ಯೆಯ ಮುಸ್ಲಿಮರು ದೇಶ-ವಿದೇಶಕ್ಕೆ ತೆರಳುತ್ತಿದ್ದು, ಅವರ ಅನುಕೂಲಕ್ಕಾಗಿ ನಮಾಝ್‌ಗೆ ವ್ಯವಸ್ಥೆ ಕಲ್ಪಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಾಗಿದೆ.

ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಹಾಗು ವಕ್ಫ್ ಸಚಿವ ತನ್ವೀರ್ ಸೇಠ್‌ರ ಫೆ.16ರಂದು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಿಗೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಅದರಂತೆ ಪ್ರಾಧಿಕಾರವು ವಿಮಾನ ನಿಲ್ದಾಣದೊಳಗೆ ನಮಾಝ್‌ಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಈಗಾಗಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವ್ಯವಸ್ಥೆ ಕಲ್ಪಿಸಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪ್ರಾಧಿಕಾರದ ನಿರ್ದೇಶಕ ರಾಧಾಕೃಷ್ಣ 'ಸಚಿವರು ಈ ಬಗ್ಗೆ ತನ್ನ ಗಮನ ಸೆಳೆದಿದ್ದು, 2 ವಾರದೊಳಗೆ ನಮಾಝ್‌ಗೆ ವ್ಯವಸ್ಥೆ ಕಲ್ಪಿಸಲಾಗುವುದು' ಎಂದು ತಿಳಿಸಿದ್ದಾರೆ.

ಅಭಿನಂದನೆ:

ಮುಸ್ಲಿಮರಿಗೆ ಐದು ವಕ್ತ್ ನಮಾಝ್ ಕಡ್ಡಾಯವಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಮೂಲಕ ದಿನಂಪ್ರತಿ ನೂರಾರು ಮುಸ್ಲಿಮರು ಬೇರೆ ಬೇರೆ ಕಡೆ ತೆರಳುತ್ತಿದ್ದಾರೆ. ಆದರೆ ಇಲ್ಲಿ ಕ್ಲಪ್ತ ಸಮಯಕ್ಕೆ ನಮಾಝ್ ಮಾಡಲು ವ್ಯವಸ್ಥೆ ಇರಲಿಲ್ಲ. ಈ ಬಗ್ಗೆ ಸಚಿವ ತನ್ವೀರ್ ಸೇಠ್‌ರ ಗಮನ ಸೆಳೆಯಲಾಗಿತ್ತು. ಅದರಂತೆ ಅವರು ಪ್ರಾಧಿಕಾರದ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಮನವಿಗೆ ಸ್ಪಂದಿಸಿದ ಸಚಿವರಿಗೂ, ಅದನ್ನು ಕಾರ್ಯಗತಗೊಳಿಸಲು ಮುಂದಾದ ಪ್ರಾಧಿಕಾರದ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಪರಿಸರ ಪ್ರೇಮಿ ಬಿ.ಎಸ್.ಹಸನಬ್ಬ ಅಮ್ಮೆಂಬಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News