×
Ad

ಸರಕಾರ ರೈತರ ಅಸಹಾಯಕತೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ: ಶ್ರೀರಾಮ ರೆಡ್ಡಿ

Update: 2017-03-20 20:16 IST

ಉಳ್ಳಾಲ, ಮಾ.20: ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಗೆ ಕೃಷಿ ಭೂಮಿಯ ಮೂಲ ಸೌಲಭ್ಯ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸುವ ಬದಲು ಅವರ ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಅವರ ಜಾಗಗಳಲ್ಲಿ ಕಾರ್ಖಾನೆಗಳನ್ನು ನಿರ್ಮಿಸಿ ಅವರನ್ನೇ ಕೂಲಿಯಾಳುಗಳನ್ನಾಗಿ ದುಡಿಸಿಕೊಳ್ಳುವ ಪದ್ದತಿಯನ್ನು ಬೆಳೆಸುತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಆರೋಪಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಆಯೋಜಿಸಲಾಗಿದ್ದ ದ.ಕ.ಜಿಲ್ಲಾ ರೈತ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

380 ಕಾರ್ಪೊರೇಟ್ ಕಂಪೆನಿಗಳಿಗೆ 6 ಲಕ್ಷ ಕೋಟಿ ತೆರಿಗೆ ವಿನಾಯಿತಿ ನೀಡಿದಾಗ ಸರಕಾರಕ್ಕೆ ನಷ್ಟವಾಗಿಲ್ಲ. 1,48,000 ಕೋಟಿ ರೈತರಿಗೆ ಸಬ್ಸಿಡಿ ಕೊಡಬೇಕಾದಲ್ಲಿ ಕೇಂದ್ರ ಸಚಿವ ಅರವಿಂದ ಸುಬ್ರಹ್ಮಣ್ಯಂ ನಷ್ಟದ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ಧರಾಮಯ್ಯ ಸರಕಾರ ಹಿಂದಿನ ಬಜೆಟಿನಲ್ಲಿ ಲಿಕ್ಕರ್ ವ್ಯವಹಾರದಲ್ಲಿನ 800 ಕೋಟಿ ತೆರಿಗೆ ಬಾಕಿಯಿರುವ ಕುರಿತು ಹೇಳಿದ್ದರು. ಇತ್ತೀಚೆಗೆ ನಡೆದಿರುವ ಬಜೆಟಿನಲ್ಲಿ ಅದರ ಕುರಿತ ಪ್ರಸ್ತಾಪವೇ ಬಂದಿಲ್ಲ. ರೈತರ ಸಾಲ ಮನ್ನಾ ಆಗಲಿ ಅವರ ಮೂಲಭೂತ ಸಮಸ್ಯೆಗಳಿಗೆ ರಾಜ್ಯ ಬಜೆಟಿನಲ್ಲಿ ಸ್ಪಂದನೆಯೇ ದೊರೆತಿಲ್ಲ ಎಂದರು.

ಕೇಂದ್ರ ಸರಕಾರ ವಜ್ರ, ಚಿನ್ನದ ವ್ಯಾಪಾರಿಗಳಿಗೆ ತೆರಿಗೆ ವಿನಾಯಿತಿಯನ್ನು ಮಾಡುತ್ತಿದೆ. ಇವರ ತೆರಿಗೆ ವಿನಾಯಿತಿ ಮಾಡಿದ ಹಣದಲ್ಲಿ ದೇಶದ 3 ಲಕ್ಷದಷ್ಟು ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದಿತ್ತು. ದೇಶದಲ್ಲಿ ಶೇ.28ರಷ್ಟು ಮಾತ್ರ ನೀರಾವರಿಗಳನ್ನು ಮಾತ್ರ ಉಪಯೋಗಿಸಲಾಗುತ್ತಿದೆ. ಉಳಿದ ನೀರು ಸಮುದ್ರಕ್ಕೆ ಸೇರುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಂಪೆನಿ ಕೃಷಿ ಮಾಡಲು ಹೊರಟಿದೆ. ಆದರೆ ವರ್ಷದಲ್ಲಿ 12,500 ದಷ್ಟು ಮೂಲ ರೈತರು ಕೃಷಿಯೇ ಬೇಡ ಅನ್ನುತ್ತಾ ಹೊರರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ತಿಂಗಳಿಗೆ 46 ಮಂದಿ ರೈತರು ಆತ್ಮಹತ್ಯೆ ಮಾಡುತ್ತಲೇ ಬಂದಿದ್ದಾರೆ. ರಾಜ್ಯದಲ್ಲಿ ಡೈರಿ ಕಿತ್ತಾಟದಲ್ಲಿ ತೊಡಗಿರುವ ಜನಪ್ರತಿನಿಧಿಗಳಿಗೆ ನೀರಿನ ಸಮಸ್ಯೆಯೇ ಇಲ್ಲವಾಗಿದೆ. ಬರ ಕುರಿತು ನಡೆಸುವ ಸಭೆಯಲ್ಲಿಯೂ ಜನಪ್ರತಿನಿಧಿಗಳೇ ಭಾಗವಹಿಸದೆ, ಇಡೀ ರಾಜ್ಯದ ಸ್ಥಿತಿಯನ್ನೇ ದುಸ್ತರವಾಗಿಸಿದ್ದಾರೆ ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ವಹಿಸಿದ್ದರು.

ರೈತ ಸಂಘ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಗೌರವಾಧ್ಯಕ್ಷ ಬಾಲಕೃಷ್ಣ ಸಾಲ್ಯಾನ್ ಕಂಪ, ಶ್ರೀನಿವಾಸ ಆಳ್ವ ಕಟ್ಟೆಮಾರ್ ಮಂಜನಾಡಿ,ಜಿಲ್ಲಾ ಉಪಾಧ್ಯಕ್ಷರುಗಳಾದ ವಾಸುದೇವ ಉಚ್ಚಿಲ್, ಬಿ.ನಾರಾಯಣ , ಕಾರ್ಯಾಧ್ಯಕ್ಷ ಸಂಜೀವ ಭಂಡಾರಿ ತೋಡ್ದಲ, ಕೋಶಾಧಿಕಾರಿ ಜಯಂತ ಅಂಬ್ಲಮೊಗರು ಮೊದಲಾದವರು ಉಪಸ್ಥಿತರಿದ್ದರು.

 ಪ್ರಧಾನ ಕಾರ್ಯದರ್ಶಿ ಸಂಜೀವ ಪಿಲಾರ್ ಸ್ವಾಗತಿಸಿದರು. ವಾಸುದೇವ ಉಚ್ಚಿಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News