ಉಡುಪಿ: ಮಾ.21ರಂದು ವಿಶ್ವ ಗೊಂಬೆಯಾಟ ದಿನಾಚರಣೆ
ಉಡುಪಿ, ಮಾ.20: ಹೊಸದಿಲ್ಲಿಯ ಕೇಂದ್ರ ಸಂಸ್ಕೃತಿ ಸಚಿವಾಲಯ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು, ಮಣಿಪಾಲ ವಿವಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ಉಡುಪಿಯ ಪಚ್ಚೆ ಭಾರತ ಗೊಂಬೆ-ಚಿತ್ತಾರ ರಂಗ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗೊಂಬೆಯಾಟ ದಿನಾಚರಣೆ ಅಂಗವಾಗಿ ಇಂದು ವಿಚಾರ ಸಂಕಿರಣ ಹಾಗೂ ಗೊಂಬೆಯಾಟದ 'ಪುತ್ಥಳಿ ರಂಗ ಯಾತ್ರಾ' ಕಾರ್ಯಕ್ರಮ ನಡೆಯಲಿದೆ.
ಪುತ್ಥಳಿ ರಂಗಯಾತ್ರೆಯ ಸಂಯೋಜಕ ಪ್ರೊ.ಎಸ್.ಎ.ಕೃಷ್ಣಯ್ಯ ಅವರು ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಈ ಸಂದರ್ಭದಲ್ಲಿ ಶುದ್ಧ ಪರಿಸರ ಹಾಗೂ ಸ್ವಚ್ಛ ಪರಿಸರದ ಕುರಿತು ಜನರಲ್ಲಿ ಅರಿವು, ಜಾಗೃತಿ ಮೂಡಿಸಲು, ಫ್ಲಾಸಿಕ್ಟ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತ 'ಫ್ಲಾಸ್ಟಿಕಾಸುರ' ಎಂಬ ಗೊಂಬೆಯಾಟ ಪ್ರದರ್ಶನ ನಡೆಯಲಿದೆ ಎಂದರು.
ಕಾರ್ಯಕ್ರಮವು ನಾಳೆ ಸಂಜೆ 5:00ಗಂಟೆಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ನಾಡೋಜ ಹಾಗೂ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಉತ್ತರ ಕನ್ನಡದ ಸುಕ್ರಿ ಬೊಮ್ಮಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಬೆಂಗಳೂರು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಾಲಾಜಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಡಾ.ಎಚ್.ಶಾಂತಾರಾಮ್, ಕಿಶನ್ ಹೆಗ್ಡೆ ಪಳ್ಳಿ, ಅಂಬಾತನಯ ಮುದ್ರಾಡಿ, ಬಿ.ಜಯಕರ ಶೆಟ್ಟಿ ಇಂದ್ರಾಳಿ, ಡಾ.ನಿರಂಜನ ಯು.ಸಿ. ಕಾಲೇಜಿನ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕುಸುಮಾ ಕಾಮತ್ ಅತಿಥಿಗಳಾಗಿ ಉಪಸ್ಥಿತರಿರುವರು.
ಪ್ರಕೃತಿ-ಪರಿಸರ ವಿನಾಶಕಾರಿ ದೈತ್ಯನ ಕುರಿತು ಗೊಂಬೆಯಾಟ ಱಫ್ಲಾಸ್ಟಿಕಾಸುರೞದ ಸಾಹಿತ್ಯವನ್ನು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯ ಅಂಬಾತನಯ ಮುದ್ರಾಡಿ ರಚಿಸಿದ್ದು, ಬಳ್ಳಾರಿಯ ಕಾವ್ಯಾಮೃತ ಸಂಭಾಷಣೆ ರಚಿಸಿದ್ದಾರೆ. ವಿಶ್ವನಾಥ ಹಿರೇಮಠ ಸಂಗೀತ ಒದಗಿಸಿದ್ದಾರೆ. ಇದರ ಕಥೆ ಮತ್ತು ನಿರ್ದೇಶನವನ್ನು ಪ್ರೊ.ಎಸ್.ಎ.ಕೃಷ್ಣಯ್ಯ ಮಾಡಿದ್ದಾರೆ. ಉಡುಪಿಯ ರಾಘವೇಂದ್ರ ಅಮೀನ್ ಹಾಗೂ ಸಿಂಗಲೂರಿನ ಮಲ್ಲಿಕಾರ್ಜುನ ಬಿ.ವಿ. ವಿಶಿಷ್ಟವಾದ ಮುಖವಾಡ-ಗೊಂಬೆಗಳನ್ನು ನಿರ್ಮಿಸಿದ್ದಾರೆ.
ಅಲ್ಲದೇ 'ಪರಿಸರ ಕಾಳಜಿ-ಫ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ' ಕುರಿತು ವಿಚಾರ ಸಂಕಿರಣ ನಡೆಯಲಿದೆ. ಸಿಕ್ಕಿಂ ಮಣಿಪಾಲ ವಿವಿಯ ಪರಿಸರ ಪ್ರಾಧ್ಯಾಪಕ ಡಾ. ಮನೋಜ್ ನಾಗಸಂಪಿಗೆ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರೊ.ಕೃಷ್ಣಯ್ಯ ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ಅಮೀನ್ ಹಾಗೂ ಮಲ್ಲಿಕಾರ್ಜುನ ಬಿ.ವಿ. ಉಪಸ್ಥಿತರಿದ್ದರು.