ಮಂಗಳೂರು ವಿವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೊಡೆದಾಟ
ಮಂಗಳೂರು, ಮಾ.20: ಮಂಗಳೂರು ವಿವಿ ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ಸಂಭವಿಸಿದ್ದು, ಇತ್ತಂಡಗಳು ಆಸ್ಪತ್ರೆಗೆ ದಾಖಲಾಗಿವೆ.
ಮಾ.9ರಂದು ವಿದ್ಯಾರ್ಥಿಗಳಾದ ನವಾಝ್ ಮತ್ತು ಉಕಾಸ್ ಎಂಬವರಿಗೆ ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ವಿದ್ಯಾರ್ಥಿಗಳಾದ ಚೈತನ್ಯ, ಚೇತನ್, ಅನಿಲ್ ಎಂಬವರು ಹಲ್ಲೆ ನಡೆಸಿದ್ದ ಬಗ್ಗೆ ಪಾಂಡೇಶ್ವರ ಠಾಣೆಗೆ ಪರಸ್ಪರ ದೂರು ನೀಡಲಾಗಿತ್ತು. ಈ ಮಧ್ಯೆ ಕಾಲೇಜಿನ ಪ್ರಾಂಶುಪಾಲರು ಐವರು ವಿದ್ಯಾರ್ಥಿಗಳನ್ನು ಅಮಾನತಿನಲ್ಲಿರಿಸಿದ್ದರು.
ಅಮಾನತು ಅವಧಿಯು ಸೋಮವಾರಕ್ಕೆ ಮುಗಿಯಬೇಕಿತ್ತು. ಅದರಂತೆ ಅಪರಾಹ್ನ 2:30ಕ್ಕೆ ವಿದ್ಯಾರ್ಥಿಗಳು ಹೆತ್ತವರನ್ನು ಕಾಲೇಜಿಗೆ ಕರೆದು ತರಬೇಕಿತ್ತು. ಆದರೆ ಸೋಮವಾರ ಪೂರ್ವಾಹ್ನ ಸುಮಾರು 11:30ರ ವೇಳೆಗೆ ಚೈತನ್ಯ ಮತ್ತಿತರರು ನವಾಝ್ ಮತ್ತು ಉಕಾಸ್‌ಗೆ ಸಹಕರಿಸಿದ್ದ ಅಲಿ ಹೈದರ್ ಎಂಬವರಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಚೈತನ್ಯ ಮತ್ತು ಚೇತನ್‌ಗೆ ಐದಾರು ಮಂದಿಯನ್ನೊಳಗೊಂಡ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ. ಹೀಗೆ ಇತ್ತಂಡದ ಕಾಲೇಜು ವಿದ್ಯಾರ್ಥಿಗಳು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಚೈತನ್ಯ ನೀಡಿದ ದೂರಿನಂತೆ ಪಾಂಡೇಶ್ವರ ಠಾಣೆಯಲ್ಲಿ ಐವರ ಮೇಲೆ ಪ್ರಕರಣ ದಾಖಲಾಗಿದೆ.
ಎಬಿವಿಪಿ ಸಂಘಟನೆಯ ಕಾಲೇಜು ಘಟಕದ ಅಧ್ಯಕ್ಷ ಚೈತನ್ಯ ಮತ್ತಿತರರು ಏಕಾಎಕಿ ತರಗತಿಗೆ ನುಗ್ಗಿ ಅಲಿಹೈದರ್‌ಗೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಅಲಿ ಹೈದರ್‌ನನ್ನು ವಿದ್ಯಾರ್ಥಿ ಅಶ್ವಿರ್ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಯಾವುದೇ ಮಾಹಿತಿ ನೀಡದೆ ಅಲಿಹೈದರ್ ಮತ್ತು ಆಸ್ಪತ್ರೆಗೆ ದಾಖಲಿಸಿದ ಅಶ್ವಿರ್‌ನನ್ನು ಕರೆದೊಯ್ದಿದ್ದಾರೆ. ಇದು ಪೊಲೀಸರ ಎಸಗುವ ತಾರತಮ್ಯವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್‌ಇಂಡಿಯಾ (ಸಿಎಫ್‌ಐ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಆರೋಪಿಸಿದ್ದಾರೆ.
ಕೆಲವು ಸಮಯದಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ಸಂಭವಿಸುತ್ತಿದೆ. ಸೋಮವಾರ ಚೈತನ್ಯ ಮತ್ತಾತನ ಸ್ನೇಹಿತ ಚೇತನ್ ಕಾಲೇಜ್ ಕ್ಯಾಂಪಸ್‌ನಲ್ಲಿರುವಾಗ ಐದಾರು ಮಂದಿಯ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿದೆ. ಈ ಬಗ್ಗೆ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಎಬಿವಿಪಿ ರಾಜ್ಯ ಉಪಾಧ್ಯಕ್ಷ ಕೇಶವ ಬಂಗೇರಾ ತಿಳಿಸಿದ್ದಾರೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಸಂಭವಿಸಿದ ಹೊಡೆದಾಟಕ್ಕೆ ಸಂಬಂಧಿಸಿ ಕಾಲೇಜು ಹಂತದಲ್ಲಿ ಯಾವ ಕ್ರಮಕೈಗೊಳ್ಳಬೇಕೋ ಅದನ್ನು ಮಾಡಲಾಗುತ್ತಿದೆ. ಪೊಲೀಸರು ತನ್ನದೇ ಆದ ತನಿಖೆ ನಡೆಸಿ ಕ್ರಮ ಜರಗಿಸಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಉದಯಕುಮಾರ್ ಇರ್ವತ್ತೂರು ತಿಳಿಸಿದ್ದಾರೆ.