ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಡಿಸಿಗೆ ಮನವಿ
ಉಡುಪಿ, ಮಾ.20: ಕುಂದಾಪುರ ತಾಲೂಕು ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿತು.
ಕುಂದಾಪುರ ಸರಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಅಲ್ಲಿ ಯಾವುದೇ ವ್ಯವಸ್ಥೆ ಸರಿಯಾಗಿಲ್ಲ. ಕುಡಿಯುವ ನೀರು ಶೇಖರಿಸಿಟ್ಟಿರುವ ಟ್ಯಾಂಕಿನಲ್ಲಿ ಕಸಕಡ್ಡಿ, ಪಾಚಿ ತುಂಬಿಕೊಂಡಿದೆ. ಆಸ್ಪತ್ರೆಗೆ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ತ್ಯಾಜ್ಯ ನೀರು ಅಲ್ಲೇ ಶೇಖರಣೆಗೊಂಡಿದೆ. ವೈದ್ಯರು ಹಾಗೂ ದಾದಿಯರು ರೋಗಿಗಳ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕರವೇ ಮನವಿಯಲ್ಲಿ ದೂರಿದೆ.
ಆದುದರಿಂದ ತಾವು ಆದಷ್ಟು ಬೇಗ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು. ಸಮಸ್ಯೆ ಪರಿಹಾರ ಆಗದೆ ಇದೇ ರೀತಿ ಮುಂದುವರೆದರೆ ಸಾರ್ವಜನಿಕರೊಂದಿಗೆ ಸೇರಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಕರವೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಕರ್ನಾಟಕ ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ, ರಾಘವೇಂದ್ರ ಶೆಟ್ಟಿ, ಚಂದ್ರ ಪೂಜಾರಿ, ಸುಧೀರ್ ಪೂಜಾರಿ, ಶಾಹಿಲ್ ರಹಮತುಲ್ಲಾ, ಸುಹೇಲ್, ನಾಸೀರ್ ಯಾಕೂಬ್, ಪ್ರವೀಣ್ ಬಾರಕೂರು ಉಪಸ್ಥಿತರಿದ್ದರು.