ಉಡುಪಿ: ಮಾ.23ರಂದು ಕೆ.ವಿ ತಿರುಮಲೇಶ್‌ಗೆ ಪ್ರಶಸ್ತಿ ಪ್ರದಾನ
ಉಡುಪಿ, ಮಾ.20: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ವಿಶ್ವವಿದ್ಯಾಲಯದ ವತಿಯಿಂದ ನೀಡಲಾಗುವ 2016ನೇ ಸಾಲಿನ 'ರಾಷ್ಟ್ರಕವಿ ಗೋವಿಂದಪೈ ಪ್ರಶಸ್ತಿ' ಯನ್ನು ಹಿರಿಯ ಕವಿ, ಲೇಖಕ ಡಾ. ಕೆ.ವಿ.ತಿರುಮಲೇಶ್ ಅವರಿಗೆ ಮಾ.23ರ ಗುರುವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಗುವುದು.
ಬೆಳಗ್ಗೆ 9:30ಕ್ಕೆ ಗೋವಿಂದ ಪೈ ಅವರ ವೈಶಾಖಿ, ಗೊಲ್ಗೊಥಾ ಕಾವ್ಯಗಾಯನ ವನ್ನು ರಾಮಪ್ರಸಾದ್ ಕಾಂಚೋಡು, ಶ್ರೀದೇವಿ ಕಲ್ಲಡ್ಕ ಇವರು ಮಾಡಲಿದ್ದು, 10:00ಕ್ಕೆ ವಿಮರ್ಶಕ ಪ್ರೊ. ಮುರಲೀಧರ ಉಪಾಧ್ಯ ಹಿರಿಯಡಕ ಇವರು ಕನ್ನಡದ ಆದ್ಯ ಸಂಶೋಧನ ವಿದ್ವಾಂಸ ರಾಷ್ಟ್ರಕವಿ ಗೋವಿಂದ ಪೈ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಬೆಳಗ್ಗೆ 10:45ಕ್ಕೆ ಕವಿತಾ ಗೋಷ್ಠಿ, ಕೆ.ವಿ ತಿರುಮಲೇಶ್ ಕವಿತೆಗಳನ್ನು ಸಂಧ್ಯಾದೇವಿ,ಲಕ್ಷ್ಮೀಶ ಚೊಕ್ಕಾಡಿ,ಮೆಲ್ವಿನ್ ರೊಡ್ರಿಗಸ್, ಹರಿಯಪ್ಪಪೇಜಾವರ, ಮಹಾಲಿಂಗ ಭಟ್‌ಕೆ, ಬಿ.ಎಂ.ಬಶೀರ್, ಜ್ಯೋತಿ ಮಹಾದೇವ್ ಮರುಓದು ನಡೆಸುವರು. ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ವಹಿಸಲಿದ್ದಾರೆ.
ಅಪರಾಹ್ನ 12:00ಕ್ಕೆ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನೆ ನಡೆಯಲಿದೆ. ಅಧ್ಯಕ್ಷತೆಯನ್ನು ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ವಹಿಸಲಿದ್ದಾರೆ. ತುಳು ವಿದ್ವಾಂಸ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಶುಭಾಸಂಶನೆ ಮಾಡಲಿದ್ದಾರೆ. ಅಭಿನಂದನಾ ಭಾಷಣ ಮಾಡುವ ಖ್ಯಾತ ಸಾಹಿತಿ, ಅಂಕಣಕಾರ ಎಸ್. ದಿವಾಕರ್ ಡಾ.ಕೆ.ವಿ. ತಿರುಮಲೇಶ್ ಸಾಹಿತ್ಯದ ಕುರಿತು ಮಾತನಾಡಲಿರುವರು.
ಅಪರಾಹ್ನ 3:00ರಿಂದ 'ನನ್ನ ಸಾಹಿತ್ಯ' ಕುರಿತು ಕೆ.ವಿ ತಿರುಮಲೇಶ್ ಅವರೊಂದಿಗೆ ಸಂವಾದ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಹಾಗೂ ಸಹಸಂಯೋಜಕ ಡಾ.ಅಶೋಕ್ ಆಳ್ವ ತಿಳಿಸಿದ್ದಾರೆ.