×
Ad

ಝಾಕಿರ್ ನಾಯ್ಕ್ ಆಸ್ತಿ ಮುಟ್ಟುಗೋಲು

Update: 2017-03-21 09:31 IST

ಹೊಸದಿಲ್ಲಿ, ಮಾ.21: ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಅವರು ಮ್ಯೂಚುವಲ್ ಫಂಡ್ ಹಾಗೂ ಸ್ತಿರಾಸ್ಥಿಯಲ್ಲಿ ಮಾಡಿದ್ದ ಹೂಡಿಕೆ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಸೇರಿದಂತೆ 18.37 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕಾನೂನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ನಾಯ್ಕ್ ಅವರು ಭಯೋತ್ಪಾದನೆ ಮತ್ತು ಹಣಕಾಸು ಅಕ್ರಮ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖಾ ಏಜೆನ್ಸಿಗಳು ತೀವ್ರ ತನಿಖೆ ನಡೆಸುತ್ತಿವೆ.

ಸೌದಿ ಅರೇಬಿಯಾದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎನ್ನಲಾದ ಝಾಕಿರ್ ನಾಯ್ಕ್ ವಿರುದ್ಧ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಹೊಸ ಸಮನ್ಸ್ ಜಾರಿಗೊಳಿಸಿದೆ. ಮಾರ್ಚ್ 30ರೊಳಗಾಗಿ ದಿಲ್ಲಿಯ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅಪರಾಧ ದಂಡಸಂಹಿತೆಯ ಸೆಕ್ಷನ್ 164ರ ಅನ್ವಯ ನಾಯ್ಕ್ ಅವರ ಇಬ್ಬರು ನಿಕಟವರ್ತಿಗಳ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಎನ್‌ಐಎ ದಾಖಲಿಸಿಕೊಂಡಿದೆ. ಸಾರ್ವಜನಿಕ ಭಾಷಣಗಳ ಮೂಲಕ ದ್ವೇಷ ಹಾಗೂ ಶತ್ರುತ್ವ ಭಾವನೆಯನ್ನು ವಿವಿಧ ಧಾರ್ಮಿಕ ನಂಬಿಕೆಗಳ ವರ್ಗದಲ್ಲಿ ಹೇಗೆ ಬಿತ್ತುತ್ತಿದ್ದರು ಎನ್ನುವುದನ್ನು ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

ಹೊಸದಾಗಿ ನೀಡಿರುವ ಸಮನ್ಸ್ ನಿರ್ಲಕ್ಷಿಸಿದರೆ, ಘೋಷಿತ ಅಪರಾಧಿ ಎಂದು ಅವರನ್ನು ಪರಿಗಣಿಸಬೇಕಾಗುತ್ತದೆ. ಬಳಿಕ ಇಂಟರ್‌ಪೋಲ್ ಮೂಲಕ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಲಾಗುತ್ತದೆ. ನಾಯ್ಕ್ ವಿರುದ್ಧದ ಆರೋಪಪಟ್ಟಿ ಅಂತಿಮಪಡಿಸುವ ಪ್ರಕ್ರಿಯೆ ಕೂಡಾ ಜಾರಿಯಲ್ಲಿದ್ದು, ಸೌದಿ ಅರೇಬಿಯಾದಿಂದ ಗಡೀಪಾರು ಪ್ರಕ್ರಿಯೆಗೂ ಈ ಮೂಲಕ ಚಾಲನೆ ದೊರಕಲಿದೆ ಎಂದು ಕಾನೂನು ಜಾರಿ ನಿರ್ದೇಶನಾಲಯ ಹಾಗೂ ಎನ್‌ಐಎ ಮೂಲಗಳು ಹೇಳಿವೆ.

ನಾಯ್ಕ್ ವಿರುದ್ಧ ಈಗಾಗಲೇ ನಾಲ್ಕು ಸಮನ್ಸ್ ಜಾರಿಯಾಗಿದ್ದು, ಎಲ್ಲದರಿಂದಲೂ ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News