ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮಾಝ್‌ಗೆ ವ್ಯವಸ್ಥೆ ಅಭಿನಂದನಾರ್ಹ: ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್
ಬಜ್ಪೆ, ಮಾ.21: ರಾಜ್ಯ ಅಲ್ಪಸಂಖ್ಯಾತರ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್ ಸೂಚನೆ ಮೇರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮಾಝ್ ನಿರ್ವಹಿಸಲು ಸ್ಥಳಾವಕಾಶ ನೀಡಲು ಮುಂದಾಗಿರುವ ಪ್ರಾಧಿಕಾರದ ನಿಲುವನ್ನು ಬಜ್ಪೆ ಸೆಕ್ಟರ್ ಎಸ್ಸೆಸ್ಸೆಫ್ ಶ್ಲಾಘಿಸಿದೆ.
ಮಂಗಳೂರು ವಿಮಾನ ನಿಲ್ದಾಣದ ಮೂಲಕ ರಾಜ್ಯದ ಮತ್ತು ನೆರೆ ರಾಜ್ಯಗಳ ಸಾಕಷ್ಟು ಪ್ರಮಾಣದಲ್ಲಿ ಮುಸ್ಲಿಮರು ಪ್ರಯಾಣಿಸುತ್ತಾರೆ. ಆದರೆ ಅವರಿಗೆ ದಿನನಿತ್ಯದ ನಮಾಝ್ ನಿರ್ವಹಿಸಲು ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ನಾಲ್ಕೈದು ಕಿಲೋಮೀಟರ್ ದೂರದ ಮರವೂರು ಮಸೀದಿಯನ್ನು ಪ್ರಯಾಣಿಕರು ಆಶ್ರಯಿಸುತ್ತಿದ್ದರು. ಇದೀಗ ವಿಮಾನ ನಿಲ್ದಾಣದಲ್ಲಿಯೇ ನಮಾಝಿಗೆ ವ್ಯವಸ್ಥೆ ಕಲ್ಪಿಸಿದ್ದು ಅತ್ಯಂತ ಸ್ವಾಗತಾರ್ಹ ನಡೆಯಾಗಿದೆ ಮತ್ತು ಇದಕ್ಕೆ ಸಹಕರಿಸಿದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್ ಮತ್ತು ಪ್ರಾಧಿಕಾರದ ನಿರ್ದೇಶಕ ರಾಧಾಕೃಷ್ಣರವರನ್ನು ಅಭಿನಂದಿಸುತ್ತೇವೆ ಎಂದು ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಅಧ್ಯಕ್ಷ ಬಿ.ಎ ಶಾಕಿರ್ ಅಹ್ಮದ್ ಬಜ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.