×
Ad

ಸಹ್ಯಾದ್ರಿ ಸಂಚಯದಿಂದ ‘ನದಿ ವನ ರೋದನ’ ಕಾರ್ಯಕ್ರಮ

Update: 2017-03-21 12:08 IST

ಮಂಗಳೂರು, ಮಾ.21: ಪಶ್ಚಿಮ ಘಟ್ಟದ ಮೇಲಾಗುವ ದೌರ್ಜನ್ಯವನ್ನು ಖಂಡಿಸಿ ಮತ್ತು ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ 'ಸಹ್ಯಾದ್ರಿ ಸಂಚಯ'ವು ಮಂಗಳವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ 'ನದಿ ವನ ರೋದನ' ಕಾರ್ಯಕ್ರಮ ನಡೆಸಿತು. ಈ ಸಂದರ್ಭ 'ಮಡಕೆ'ಯೊಂದನ್ನು ಮುಖ್ಯಮಂತ್ರಿಗೆ ಕೋರಿಯರ್ ಮೂಲಕ ಕಳುಹಿಸಿಕೊಟ್ಟು ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು 'ಎಲ್ಲಾ ಮಾಯಾ... ಎಲ್ಲಾ ಮಾಯಾ... ನಾಳೆ ನಾವೂ ಮಾಯಾ...' ಎಂಬ ಪರಿಸರ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರಲ್ಲದೆ ಬೀದಿ ನಾಟಕದ ಮೂಲಕ ಜನರ ಗಮನ ಸೆಳೆದರು.

ಬರಗಾಲದಿಂದ ಪಕ್ಷಿಗಳಿಗೂ ನೀರಿನ ಕೊರತೆಯಾಗಿದೆ ಎಂದು ಬಿಂಬಿಸುವ ಸಲುವಾಗಿ 'ಜೈ ನೇತ್ರಾವತಿ' ಎಂದು ಬರೆಯಲಾದ ಪುಟ್ಟ ಮಡಕೆಯನ್ನು ಪ್ರದರ್ಶಿಸಿ ಇಂತಹ ಮಡಕೆಯನ್ನು ಎಲ್ಲ ಮನೆಗಳ ಛಾವಣಿಯಲ್ಲಿಟ್ಟು ಪಕ್ಷಿಗಳ ಬಗ್ಗೆ ಕರುಣೆ ತೋರುವಂತೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಈ ಸಂದರ್ಭ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ ಪಶ್ಚಿಮ ಘಟ್ಟದ ಮೇಲೆ ನಿರಂತರ ದೌರ್ಜನ್ಯವಾಗುತ್ತಿದೆ. ಮಾನವನ ಅಕ್ರಮ ಚಟುವಟಿಕೆ ಹೆಚ್ಚುತ್ತಿವೆ. ಪರಿಸರ ವಿನಾಶದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇತ್ತ ನೇತ್ರಾವತಿಯ ಒಡಲಲ್ಲಿರುವ ಬಂಟ್ವಾಳ-ಮಂಗಳುರು ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಸರಕಾರ ಸ್ವಯಂ ಆಗಿ ನೇತ್ರಾವತಿ ನದಿ ಬತ್ತಿದೆ ಎಂಬುದನ್ನು ಒಪ್ಪಿಕೊಂಡಿದೆ ಎಂದು ಹೇಳಿದರು.

ಗುಜರಾತ್‌ನಿಂದ ಕೇರಳದ 1,600 ಕೀ.ಮೀ.ವರೆಗಿನ ಪಶ್ಚಿಮ ಘಟ್ಟದ ಮೇಲೆ ನಿರಂತರ ದೌರ್ಜನ್ಯವಾಗುತ್ತಲೇ ಇದೆ. ಅರಣ್ಯಾಧಿಕಾರಿಗಳು, ಜನಪ್ರತಿನಿಧಿಗಳ ಸಹಿತ ಎಲ್ಲರೂ ಕೂಡ ಅರಣ್ಯವನ್ನು ರೆಸಾರ್ಟ್ ಮಾಡುತ್ತಿದ್ದಾರೆ. ಅವುಗಳ ಮರದ ವ್ಯಾಪಾರ, ರಿಯಲ್ ಎಸ್ಟೇಟ್, ಗಾಂಜಾ ದಂಧೆಯ ಅಡ್ಡೆಗಳಾಗುತ್ತಿವೆ ಎಂದು ಆಪಾದಿಸಿದ ದಿನೇಶ್ ಹೊಳ್ಳ ಕಳೆದ ಮೂರು ವರ್ಷದಿಂದ ಕುದುರೆಮುಖ, ಚಾರ್ಮಾಡಿ, ದಾಂಡೇಲಿ, ನಾಗರಹೊಳೆ, ಬಂಡಿಪುರ ಮತ್ತಿತ್ಯಾದಿ ಕಡೆ ಕಾಡ್ಗಿಚ್ಚು ಸಂಭವಿಸಿದೆ. ಕಾಡ್ಗಿಚ್ಚುವಿನಿಂದ ಕಾಡನ್ನು ಸಂರಕ್ಷಿಸಲು ಹೆಲಿಕಾಪ್ಟರ್ ಖರೀದಿಸಿ ಎಂದು ಸರಕಾರಕ್ಕೆ ಮನವಿ ಮಾಡಿದರೂ ಕೂಡ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶಶಿಧರ ಶೆಟ್ಟಿ, ದಿನೇಶ್ ಪೈ ಕಟೀಲ್, ದಿನೇಶ್ ಕೋಡಿಯಾಲ್‌ಬೈಲ್ ಮತ್ತಿತರರು ಮಾತನಾಡಿದರು.

'ನದಿ ವನ ರೋದನ'ದ ಮೂಲಕ ಮಂಡಿಸಲಾದ ಬೇಡಿಕೆಗಳು

►ನದಿ ಮೂಲಗಳಿರುವ ಸೂಕ್ಷ್ಮಜೀವ ವೈವಿಧ್ಯ ಪ್ರದೇಶದಲ್ಲಿ ಮಾನವ ಚಟುವಟಿಕೆಗಳಿಗೆ ತಡೆ ನೀಡಬೇಕು.

►ಅಕ್ರಮ ಚಟುವಟಿಕೆ ಮಾಡಿದವರಿಗೆ ಅರಣ್ಯ ಕಾಯ್ದೆಯನ್ವಯ ಕಠಿಣ ಶಿಕ್ಷೆ ವಿಧಿಸಬೇಕು.

►ಶೋಲಾರಣ್ಯ-ಹುಲ್ಲುಗಾವಲು, ವನ್ಯಜೀವಿಗಳಿರುವ ಪ್ರದೇಶದಲ್ಲಿ ಕಾಡ್ಗಿಚ್ಚು ನಂದಿಸಲು ಹೆಲಿಕಾಪ್ಟರ್‌ಮೂಲಕ ನೀರು ಚಿಮುಕಿಸುವ ವ್ಯವಸ್ಥೆಯಾಗಬೇಕು.

►ಪರಿಸರ ಸೂಕ್ಷ್ಮ ಪ್ರದೇಶವೆಂದು ಪಶ್ಚಿಮ ಘಟ್ಟದ ರಕ್ಷಣೆಗೆ ಯಾವುದೇ ವರದಿ ಜಾರಿಯಾಗುವುದಿದ್ದರೂ ಅದರ ಸಾಧಕ ಬಾಧಕಗಳ ಬಗ್ಗೆ ಆಯಾ ಅರಣ್ಯ ಪ್ರದೇಶ ವ್ಯಾಪ್ತಿಯ ಜನರುಗೆ ಮನವರಿಕೆ ಮಾಡಿಕೊಡಬೇಕು, ಅರಣ್ಯ ತಪ್ಪಲಿನ ಬುಡಕಟ್ಟು ಜನಾಂಗದೊಂದಿಗೆ ಅರಣ್ಯ ಇಲಾಖೆ ಉತ್ತಮ ಸಂಬಂಧ ಬೆಳೆಸಬೇಕು.

►ಮೋಜಿಗಾಗಿ, ಬೇಟೆಗಾಗಿ ವನ್ಯಜೀವಿಗೆ ತೊಂದರೆ ಕೊಡಬಾರದು.

►ಅರಣ್ಯ ಮತ್ತು ತಪ್ಪಲಲ್ಲಿ ಕಸದ ವಿಲೇವಾರಿಗೆ ಕ್ರಮ ಜರಗಿಸಬೇಕು.

►ರೆಸಾರ್ಟ್, ಹೋಮ್‌ಸ್ಟೇ, ಗಣಿಗಾರಿಕೆಗೆ, ಗಾಂಜಾ ಮಾಫಿಯಾದಿಂದ ಪಶ್ಚಿಮ ಘಟ್ಟವನ್ನು ಸಂರಕ್ಷಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News