×
Ad

ಸಚಿವರ ಕಾರುಗಳ ಮೇಲೆ ಕೆಂಪುದೀಪ ತಪ್ಪಲ್ಲ:ಉಮಾ ಭಾರತಿ

Update: 2017-03-21 15:24 IST

ಹೊಸದಿಲ್ಲಿ,ಮಾ.21: ಸಚಿವರು ಅಧಿಕೃತ ಕರ್ತವ್ಯದ ಮೇರೆಗೆ ಪ್ರಯಾಣಿಸುತ್ತಿದ್ದರೆ ವಾಹನಗಳ ಮೇಲೆ ಕೆಂಪುದೀಪಗಳ ಬಳಕೆ, ಸಂಚಾರ ಸ್ಥಗಿತ ಮತ್ತು ವಿಮಾನಯಾನ ವನ್ನು ವಿಳಂಬಿಸುವುದು ಕೂಡ ಸ್ವೀಕಾರಾರ್ಹವಾಗಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಮಂಗಳವಾರ ಇಲ್ಲಿ ಹೇಳಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಸಚಿವರು ತಮ್ಮ ಅಧಿಕೃತ ಕಾರುಗಳ ಮೇಲೆ ಕೆಂಪುದೀಪವನ್ನು ಬಳಸದಂತೆ ಸೋಮವಾರ ಆದೇಶ ಹೊರಡಿಸಿದ್ದರೆ, ಇದಕ್ಕೂ ಮುನ್ನ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೂ ಸರಕಾರಿ ವಾಹನಗಳ ಮೇಲೆ ಕೆಂಪುದೀಪ ಬಳಕೆಯನ್ನು ನಿಷೇಧಿಸಲು ನಿರ್ಧರಿಸಿದ್ದರು.

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೂ 2015ರಲ್ಲಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಚಿವರು ತಮ್ಮ ಅಧಿಕೃತ ವಾಹನಗಳ ಮೇಲೆ ಕೆಂಪುದೀಪ ಬಳಸುವುದನ್ನು ನಿಷೇಧಿಸಿದ್ದರು.

ಇದು ತಪ್ಪು. ಸಚಿವರೋರ್ವರು ಅಧಿಕೃತ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರೆ ಅವರು ವಾಹನದ ಮೇಲೆ ಕೆಂಪುದೀಪವನ್ನು ಬಳಸಬೇಕು ಮತ್ತು ಅವರಿಗಾಗಿ ಇತರ ವಾಹನಗಳ ಸಂಚಾರವನ್ನು ನಿಲ್ಲಿಸಬೇಕು. ಅಗತ್ಯವಾದರೆ ಸಚಿವರ ಆಗಮನಕ್ಕಾಗಿ 5-7 ನಿಮಿಷಗಳ ಕಾಲ ವಿಮಾನಯಾನವನ್ನೂ ವಿಳಂಬಿಸಬಹುದು ಎಂದು ಉಮಾ ಭಾರತಿ ಭೋಪಾಲದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತನ್ನ ವಾದದ ಹಿಂದಿನ ಉದ್ದೇಶವನ್ನು ವಿವರಿಸಿದ ಅವರು, ಸಚಿವರೋರ್ವರು ಸಭೆಯಲ್ಲಿ ಭಾಗವಹಿಸಲು ವಿಫಲಗೊಂಡರೆ ಯೋಜನೆಯೊಂದಕ್ಕೆ ಸಂಬಂಧಿಸಿದ ನಿರ್ಧಾರವು ವಿಳಂಬಗೊಳ್ಳಬಹುದು ಮತ್ತು ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ಗಳ ನಷ್ಟವನ್ನುಂಟು ಮಾಡಬಹುದು ಎಂದರು.

ಆದರೆ ಸಚಿವರು ಯಾವುದೇ ಸ್ಥಳಕ್ಕೆ ವೈಯಕ್ತಿಕ ಭೇಟಿಯನ್ನು ನೀಡುತ್ತಿದ್ದರೆ ಅವರು ತನ್ನ ಹಕ್ಕುಗಳನ್ನು ಬಳಸಬಾರದು. ವಾಹನದ ಮೇಲೆ ಕೆಂಪುದೀಪ ಬಳಸಬಾರದು ಮತ್ತು ಅವರಿಗಾಗಿ ಇತರ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬಾರದು ಎಂದೂ ಉಮಾ ಭಾರತಿ ಹೇಳಿದರು.

 ಜನರು ವಾಹನಗಳ ಮೇಲೆ ಕೆಂಪುದೀಪಗಳನ್ನು ದ್ವೇಷಿಸುತ್ತಾರೆ ಎಂದು 2014ರಲ್ಲಿ ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು, ವಾಹನಗಳಿಗೆ ಕೆಂಪುದೀಪ ಮತ್ತು ಸೈರನ್ ಅಳವಡಿಕೆ ಇವೆಲ್ಲ ‘ಸ್ಥಾನಮಾನ ಸಂಕೇತ ’ಗಳಾಗಿವೆ. ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ಅಲ್ಲದೆ ಆ್ಯಂಬುಲನ್ಸ್,ಅಗ್ನಿಶಾಮಕ ಸೇವೆ,ಪೊಲೀಸ್ ಮತ್ತು ಸೇನೆಗೂ ಕೆಂಪುದೀಪ ಅಗತ್ಯವಾಗಿದೆ. ಇತರರು ಇದನ್ನು ಬಳಸುವುದನ್ನು ನಿಷೇಧಿಸಬಹುದು ಮತ್ತು ಇದಕ್ಕಾಗಿ ನ್ಯಾಯಾಲಯದ ಆದೇಶದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News