ಭಾರತದ ಆಕ್ಷೇಪದ ಹೊರತಾಗಿಯೂ ರೇಶ್ಮೆ ಮಾರ್ಗಕ್ಕೆ ಚಾಲನೆ : ಚೀನಾ

Update: 2017-03-21 13:52 GMT

ಬೀಜಿಂಗ್, ಮಾ. 21: ಭಾರತದ ವಿರೋಧದ ಹೊರತಾಗಿಯೂ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯದಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ತನ್ನ ಮಹತ್ವಾಕಾಂಕ್ಷೆಯ ರೇಶ್ಮೆ ಮಾರ್ಗ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಚೀನಾ ಹೇಳಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷೆಯ ಯೋಜನೆಗೆ ಜಾಗತಿಕ ಬೆಂಬಲ ವ್ಯಕ್ತವಾಗಿದ್ದು, ‘ಹೆಚ್ಚು ವೈಚಾರಿಕ’ ನಿಲುವನ್ನು ಅನುಸರಿಸುವಂತೆ ಚೀನಾದ ಅಧಿಕೃತ ಮಾಧ್ಯಮ ಭಾರತಕ್ಕೆ ಕರೆ ನೀಡಿರುವ ನಡುವೆಯೇ, ಚೀನಾದ ಅಧಿಕೃತ ನಿಲುವು ಹೊರಬಿದ್ದಿದೆ.

ರೇಶ್ಮೆ ಮಾರ್ಗವು ಚೀನಾವನ್ನು ಹಲವಾರು ರೈಲು, ರಸ್ತೆ ಮತ್ತು ಬಂದರು ಯೋಜನೆಗಳ ಮೂಲಕ ಯುರೋ-ಏಶ್ಯವನ್ನು ಸಂಪರ್ಕಿಸುವ ಉದ್ದೇಶವನ್ನು ಹೊಂದಿದೆ.

15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಮಾರ್ಚ್ 17ರಂದು ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯದಲ್ಲಿ, ಮಾನವಕುಲದ ಸಾರ್ವತ್ರಿಕ ಭವಿಷ್ಯಕ್ಕಾಗಿ ಸಮುದಾಯವೊಂದನ್ನು ನಿರ್ಮಿಸುವ ಕಲ್ಪನೆಯೊಂದನ್ನು ಸೇರಿಸಲಾಗಿದೆ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಬೀಜಿಂಗ್‌ನಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘‘ವ್ಯಾಪ್ತಿ ಮತ್ತು ರಸ್ತೆ ನಿರ್ಮಾಣವನ್ನು ಇನ್ನಷ್ಟು ವಿಸ್ತರಿಸುವಂತೆ ಸಂಬಂಧಪಟ್ಟ ಎಲ್ಲ ಪಕ್ಷಗಳನ್ನು ನಿರ್ಣಯವು ಒತ್ತಾಯಿಸಿದೆ ಹಾಗೂ ಭದ್ರತಾ ಕ್ರಮಗಳ ಬಲವರ್ಧನೆಗೆ ಬೇಕಾದ ನಿರ್ದಿಷ್ಟ ಅಗತ್ಯಗಳನ್ನು ಗುರುತಿಸಿದೆ’’ ಎಂದರು.

ತುರ್ಕ್‌ಮೆನಿಸ್ತಾನ್-ಅಫ್ಘಾನಿಸ್ತಾನ-ಪಾಕಿಸ್ತಾನ-ಭಾರತ ಅನಿಲ ಪೈಪ್‌ಲೈನ್ ಮೂಲಕ ಅಫ್ಘಾನಿಸ್ತಾನ ಮತ್ತು ಅದರ ನೆರೆಯ ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ಬಲಗೊಳಿಸುವಂತೆಯೂ ನಿರ್ಣಯ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News