ಅಗ್ಗದ ನಗರ: ಜಗತ್ತಿನಲ್ಲೇ ಬೆಂಗಳೂರು ನಂ.3

Update: 2017-03-21 14:07 GMT

ಹೊಸದಿಲ್ಲಿ,ಮಾ.21: ಜಗತ್ತಿನ ಅತ್ಯಂತ ಅಗ್ಗದ ನಗರಗಳ ಪಟ್ಟಿಗೆ ಭಾರತದ ನಾಲ್ಕು ನಗರಗಳು ಸೇರ್ಪಡೆಗೊಂಡಿದ್ದು, ಸಿಂಗಾಪುರವು ಸತತ ನಾಲ್ಕನೇ ವರ್ಷವೂ ಜಗತ್ತಿನ ಅತ್ಯಂತ ದುಬಾರಿ ನಗರವಾಗಿ ಉಳಿದುಕೊಂಡಿದೆ.

  ಇಕಾನಾಮಿಕ್ ಇಂಟಲಿಜೆನ್ಸ್ ಯೂನಿಟ್(ಇಐಯು) ಸಂಸ್ಥೆಯು ಪ್ರಕಟಿಸಿರುವ ಜಗತ್ತಿನ 10 ಅತ್ಯಂತ ಅಗ್ಗದ ನಗರಗಳ ಪಟ್ಟಿಯಲ್ಲಿ ಭಾರತದ ನಗರಗಳಾದ ಬೆಂಗಳೂರು (3ನೇ ಸ್ಥಾನ),ಚೆನ್ನೈ (6), ಮುಂಬೈ (7) ಹಾಗೂ ಹೊಸದಿಲ್ಲಿ (10) ಸೇರ್ಪಡೆಗೊಂಡಿವೆ.

ಕಝಕಿಸ್ತಾನದ ಅಲ್ಮಾಟಿ ನಗರವು ಜಗತ್ತಿನ ಅತ್ಯಂತ ಅಗ್ಗದ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಆಲಂಕರಿಸಿದ್ದು, ಪಾಕಿಸ್ತಾನದ ಕರಾಚಿ (4), ಅಲ್ಜೀರಿಯದ ಅಲ್ಜೀರಿಸ್ (5), ಉಕ್ರೇನ್‌ನ ಕೀವ್(8) ಹಾಗೂ ರೊಮೆನಿಯಾದ ಬುಕಾರೆಸ್ಟ್ (9), ಅಗ್ಗದ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

 ಏಶ್ಯಖಂಡದಲ್ಲಿ ವಿಶ್ವದ ಅತ್ಯಂತ ದುಬಾರಿ ನಗರಗಳಿರುವ ಜೊತೆಗೆ ಅಗ್ಗದ ನಗರಗಳೂ ಕೂಡಾ ಹಲವು ಸಂಖ್ಯೆಯಲ್ಲಿವೆ ಎಂದವರು ಹೇಳಿದ್ದಾರೆ.

ವಿಶ್ವದ 10 ದುಬಾರಿ ನಗರಗಳ ಪಟ್ಟಿಯಲ್ಲಿ ಹಾಂಕಾಂಗ್ ಎರಡನೆ ಸ್ಥಾನವನ್ನು ಉಳಿಸಿಕೊಂಡಿದ್ದರೆ, ಝೂರಿಕ್ ಮೂರನೆ ಸ್ಥಾನದಲ್ಲಿದೆ.
 ಅತ್ಯಂತ ದುಬಾರಿಯಾದ 10 ನಗರಗಳ ಪಟ್ಟಿಯಲ್ಲಿ ಟೋಕಿಯೊ (4), ಒಸಾಕಾ (5), ಸೋಲ್ (6), ಜಿನೇವಾ (7), ಪ್ಯಾರಿಸ್ (8),ನ್ಯೂಯಾರ್ಕ್ (9) ಹಾಗೂ ಕೊೀಪನ್‌ಹೆಗನ್ (10) ಸ್ಥಾನ ಪಡೆದಿವೆ.

ಏಶ್ಯದಲ್ಲಿ, ಹಣಕ್ಕೆ ಅತ್ಯುತ್ತಮ ವೌಲ್ಯವಿರುವ ಹೆಚ್ಚಿನ ನಗರಳು ದಕ್ಷಿಣ ಏಶ್ಯದಲ್ಲಿ ಅದರಲ್ಲೂ ವಿಶೇಷವಾಗಿ ಭಾರತ ಹಾಗೂ ಪಾಕ್‌ನಲ್ಲಿವೆಯೆಂದು ವರದಿ ತಿಳಿಸಿದೆ.

ಇತರ ಕರೆನ್ಸಿಗಳ ಎದುರು ಡಾಲರ್‌ನ ವೌಲ್ಯವು ತುಸು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ, ನ್ಯೂಯಾರ್ಕ್ ಮಾತ್ರ ಜಗತ್ತಿನ 10 ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಅಮೆರಿಕನ್ ನಗರವಾಗಿದೆ. ಅಮೆರಿಕದ ಇನ್ನೊಂದು ನಗಗರವಾದ ಲಾಸ್‌ಏಂಜಲೀಸ್ 11ನೇ ರ್ಯಾಂಕ್‌ನಲ್ಲಿದೆ.

ಇಐಯು ಎರಡು ವರ್ಷಕ್ಕೊಮ್ಮೆ ವಿಶ್ವವ್ಯಾಪಿ ಜೀವನವೆಚ್ಚ ಕುರಿತ ಸಮೀಕ್ಷೆಯನ್ನು ನಡೆಸುತ್ತಿದೆ. ಆಹಾರ, ಪಾನೀಯ, ಬಟ್ಟೆ,, ಮನೆಬಾಡಿಗೆ, ಸಾರಿಗೆ, ಖಾಸಗಿ ಶಾಲೆಗಳು, ವಿದ್ಯುತ್, ನೀರುಶುಲ್ಕ, ಮನೆಸಹಾಯಕರು ಹಾಗೂ ಮನರಂಜನಾ ವೆಚ್ಚಗಳು ಸೇರಿದಂತೆ 160 ಉತ್ಪನ್ನಗಳು ಹಾಗೂ ಸೇವೆಗಳಿಗೆ ವಿವಿಧ ನಗರಗಳಲ್ಲಿರುವ 400ಕ್ಕೂ ಅಧಿಕ ಭಿನ್ನದರಗಳನ್ನು ತುಲನೆ ಮಾಡಿ ಅದು ಈ ರ್ಯಾಂಕಿಂಗ್ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News